ಬೆಂಗಳೂರು: ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮಂಪರು ಪರೀಕ್ಷೆಗೆ ಒಳಗಾಗುವುದಕ್ಕಿಂತ ಒಂದೇ ವೇದಿಕೆಗೆ ಬಂದರೆ ನಾನು ಸಿದ್ಧ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಪಂಥಾಹ್ವನ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಪರು ಪರೀಕ್ಷೆಗೆ ಒಳಪಟ್ಟರೆ ಸತ್ಯಾಂಶ ಹೊರಬರಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ರಾಜಣ್ಣ ಅವರು ಒಂದು ವೇದಿಕೆಯನ್ನು ಸೃಷ್ಟಿಸಲಿ. ನಾನು ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಇದರಲ್ಲಿ ನನಗೆ ಯಾವ ಮುಜುಗರವೂ ಇಲ್ಲ ಎಂದು ಹೇಳಿದರು. ಸತ್ಯ ಹೊರಬರಬೇಕೆಂಬದು ಎಲ್ಲರ ಒತ್ತಾಯ. ಇದರ ಹಿಂದೆ ಯಾರಿದ್ದಾರೆ? ಯಾವ ಕಾರಣಕ್ಕೆ ಹನಿಟ್ರಾಪ್ ಮಾಡಿದ್ದಾರೆ? ನಟ, ನಿರ್ಮಾಪಕ, ನಿರ್ದೇಶಕ ಯಾರೆಂಬುದು ಗೊತ್ತಾಗಬೇಕು.
ರಾಜಣ್ಣ ಒಂದೇ ವೇದಿಕೆಗೆ ಬರಲು ಸಿದ್ಧ ಎಂದರೆ ನಾನು ಸಿದ್ಧ ಎಂದು ಗುಡುಗಿದರು.ನನ್ನ ಜೊತೆ ಚರ್ಚೆಗೆ ಬರುವ ಮುನ್ನ ರಾಜಣ್ಣ ಸಾಧ್ಯವಾದರೆ ಇತಿಹಾಸಕಾರರನ್ನು ಜೊತೆಗೆ ಕರೆತರಲಿ. ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ರಾಬರ್ಟ್ ಎಂಬ ಇತಿಹಾಸಕಾರನಿದ್ದ. ಈಗ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಹಾಗೂ ಹಾಲಿ ಶಾಸಕ ಅಶೋಕ್ ಪಟ್ಟಣಶೆಟ್ಟಿ ಇದ್ದಾರೆ. ಅವರಿಗೆ ಎಲ್ಲಾ ವಿಚಾರಗಳು ಗೊತ್ತಿವೆ ಎಂದು ಹೇಳಿದರು. ನನ್ನ ಜೊತೆಗೆ ಚರ್ಚೆಗೆ ಬರುವಾಗ ರಾಜಣ್ಣ ಇತಿಹಾಸಕಾರರು ಎನಿಸಿದ ರಮೇಶ್‍ಕುಮಾರ್, ಅಶೋಕ್ ಪಟ್ಟಣಶೆಟ್ಟಿ ಅವರನ್ನು ಕರೆತರಲಿ. ಅವರಿಗೆ ಗೊತ್ತಿರುವ ವಿಷಯವನ್ನು ಅವರು ಹೇಳಲಿ. ನನಗೆ ಗೊತ್ತಿರುವ ವಿಷಯವನ್ನು ನಾನು ಬಹಿರಂಗಪಡಿಸುತ್ತೇನೆ. ಇದರಲ್ಲಿ ಯಾವ ಹಿಂಜರಿಕೆಯೂ ಇಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


