ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿ ಗಿರಿಧಾಮವನ್ನು ನವೀಕರಣ ಕಾಮಗಾರಿಯ ಹಿನ್ನಲೆ ಇಂದಿನಿಂದ 1 ತಿಂಗಳುಗಳ ಕಾಲ ಬಂದ್ ಮಾಡಲಾಗುತ್ತಿದೆ. ರಸ್ತೆ ಡಾಂಬರೀಕರಣ ಕಾಮಗಾರಿ ಸೇರಿದಂತೆ ಇತರೆ ನವೀಕರಣ ಕಾಮಗಾರಿಯ ಹಿನ್ನಲೆ ಮಾರ್ಚ್. 24ರ ಇಂದಿನಿಂದ ಏಪ್ರಿಲ್ 25ರವರೆಗೆ ಬಂದ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ PN ರವೀಂದ್ರ ತಿಳಿಸಿದ್ದಾರೆ. ವಾರಾಂತ್ಯದ ದಿನವಾದ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 8 ಗಂಟೆವರೆಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ನಂದಿ ತಪ್ಪಲಿನಿಂದ ಬೆಟ್ಟದವರೆಗೆ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಕಾಮಗಾರಿ ಸುಗಮವಾಗಿ ಮತ್ತು ಶೀಘ್ರವಾಗಿ ಮುಗಿಯುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ವಾರದ ದಿನಗಳಲ್ಲಿ ಬೆಟ್ಟಕ್ಕೆ ಪ್ರವೇಶಿಸಲು ಅವಕಾಶವಿಲ್ಲ, ಆದರೆ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ, ಶನಿವಾರ ಮತ್ತು ಭಾನುವಾರ ಮುಕ್ತವಾಗಿ ಭೇಟಿ ನೀಡಬಹುದು. ಪಿಡಬ್ಲ್ಯುಡಿ(PWD) ಇಲಾಖೆಗೂ ಕಾಮಗಾರಿ ಶೀಘ್ರ ಮುಗಿಸಲು ಸೂಚನೆ ನೀಡಲಾಗಿದೆ,ಕಾಮಗಾರಿ ಪೂರ್ಣಗೊಂಡ ಬಳಿಕ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ.ನಂದಿಬೆಟ್ಟದ ತಪ್ಪಲಿನಿಂದ ಬೆಟ್ಟದವರೆಗೂ 7.70 ಕಿಲೋಮೀಟರ್ ದೂರದ ಅಂಕುಡೊಂಕಿನ ಕಿರಿದಾದ ರಸ್ತೆ ಹದಗೆಟ್ಟಿದ್ದು, ಹೀಗಾಗಿ ಅದನ್ನು ಸರಿಪಡಿಸಿ ಡಾಂಬರೀಕರಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


