ಬೆಂಗಳೂರು: ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ನಗರದಲ್ಲಿ ನಡೆದ ರಾಜೇಂದ್ರ ಸಿಂಗ್ ಬಾಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಹ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುನಿರತ್ನ ಚಿತ್ರರಂಗದ ಜತೆ ಕುಮಾರಸ್ವಾಮಿಗಿರುವ ನಂಟನ್ನು ವಿವರಿಸಿದರು. ಚಿತ್ರರಂಗದ ಮೇಲೆ ಪ್ರೀತಿ ಇರುವವರು ಮಾತ್ರ ಇಂತಹ ಕಾರ್ಯಕ್ರಮಕ್ಕೆ ಸಮಯ ಕೊಡಲು ಸಾಧ್ಯ, ಅದರಲ್ಲೂ ಕೇಂದ್ರ ಸಚಿವರಾದರೂ ಕುಮಾರಸ್ವಾಮಿಯವರು ಕಾರ್ಯಕ್ರಮಕ್ಕೆ ಬಂದಿರುವುದು ಚಿತ್ರರಂಗದ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಮುನಿರತ್ನ ಹೊಗಳಿದರು.
ರಾಜ್ಯ ಸಚಿವರಾದರೆ ಬಿಡುವಿನ ಸಮಯವಿರುತ್ತದೆ, ಆದರೆ ಕೇಂದ್ರದ ಮಂತ್ರಿಯಾಗಿದ್ದರೆ ಬಿಡುವಿನ ಸಮಯ ಬಹಳ ಕಷ್ಟ, ಆದರೂ ಕುಮಾರಸ್ವಾಮಿಯವರು ಬಂದಿದ್ದಾರೆ ಎಂದು ಹೊಗಳಿದರು. ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಹಿಂದೆ ಇದೇ ಕುಮಾರಸ್ವಾಮಿಯವರು ನಗರದ ಪ್ರತಿಷ್ಠಿತ ಸ್ಥಳಗಳಲ್ಲಿ ಮೇರು ನಟರಾದ ರಾಜ್ಕುಮಾರ್ ಹಾಗೂ ಅಂಬರೀಶ್ ಅವರ ಸಮಾಧಿಗೆ ಅನುವು ಮಾಡಿಕೊಟ್ಟರು ಎಂದು ಹೊಗಳಿದ್ದಾರೆ.
ರಾಜ್ಕುಮಾರ್ ಅವರು ಸತ್ತಾಗ ಚಲನಚಿತ್ರ ಮಂಡಳಿ ಕಡೆಯಿಂದ ಸಮಾಧಿಗೆ ಜಾಗ ಕೇಳಿಕೊಂಡಾಗ ಕಂಠೀರವ ಸ್ಟುಡಿಯೊದಲ್ಲಿ ಸ್ಥಳಾವಕಾಶ ಕೊಟ್ಟರು, ಅದೇ ರೀತಿ ಅಂಬರೀಶ್ ಅವರು ನಿಧನ ಹೊಂದಿದಾಗಲೂ ಸಹ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿದ್ದರು ಹಾಗೂ ಆಗಲೂ ಜಾಗವನ್ನು ನೀಡಿದರು. ಆದರೆ ಮತ್ತೋರ್ವ ಮೇರುನಟ ವಿಷ್ಣುವರ್ಧನ್ ಅವರಿಗೆ ಮಾತ್ರ ಇನ್ನೂ ಸಹ ಸ್ಥಳ ಸಿಕ್ಕಿಲ್ಲ ಎಂದ ಮುನಿರತ್ನ ಒಂದುವೇಳೆ ಆಗೇನಾದರೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಿದ್ದರೆ ವಿಷ್ಣು ಸಮಾಧಿಗೂ ಜಾಗ ಲಭಿಸಿರುತ್ತಿತ್ತು ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


