5 ದಿನಗಳಿಂದ ಮಾಜಿ ಸಚಿವ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ನಾಪತ್ತೆಯಾಗಿದ್ದಾರೆ. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ 5ನೇ ಆರೋಪಿ ಪತ್ತೆಯಾಗಿ ಸಿಐಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಶಾಸಕ ಬೈರತಿ ಬಸವರಾಜ ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ. ಆದ್ದರಿಂದ ಬಂಧನ ಭೀತಿಯಲ್ಲಿರುವ ಬೈರತಿ ಬಸವರಾಜ ಕರ್ನಾಟಕ ಹೈಕೋರ್ಟ್ ಮೊರೆ ಹೋಗುವ ನಿರೀಕ್ಷೆ ಇದೆ.
ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡ ಬಳಿಕ ಬೈರತಿ ಬಸವರಾಜ ನಾಪತ್ತೆಯಾಗಿದ್ದಾರೆ. ಅವರು ಮಹಾರಾಷ್ಟ್ರ, ಗೋವಾ ರಾಜ್ಯದಲ್ಲಿ ಇರಬಹುದು ಎಂದು ಸಿಐಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅವರ ಮೊಬೈಲ್ ಕೊನೆಯ ಲೊಕೇಷನ್ ಗೋವಾದಲ್ಲಿ ಪತ್ತೆಯಾಗಿತ್ತು.
ಹೈಕೋರ್ಟ್‌ಗೆ ಅರ್ಜಿ: ಜುಲೈ 15, 2025ರಂದು ನಡೆದ ಭಾರತಿ ನಗರ ಠಾಣೆ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ 5ನೇ ಆರೋಪಿ. ಈ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬೈರತಿ ಬಸವರಾಜ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನಿರೀಕ್ಷಣಾ ಜಾಮೀನು ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿತ್ತು.
ಆದ್ದರಿಂದ ಶಾಸಕ ಬೈರತಿ ಬಸವರಾಜ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಮಂಗಳವಾರ ಕೋರ್ಟ್ ಶಾಸಕರ ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ ಸಿಐಡಿ ಪೊಲೀಸರು ಶಾಸಕರ ಬಂಧನಕ್ಕಾಗಿ, ಅವರು ದೇಶ ಬಿಟ್ಟು ಪರಾರಿಯಾಗಬಹುದು ಎಂಬ ಶಂಕೆ ಹಿನ್ನಲೆಯಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಕೋರ್ಟ್‌ನಲ್ಲಿ ಬೈರತಿ ಬಸವರಾಜ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಈ ಕೊಲೆ ಪ್ರಕರಣದಲ್ಲಿ 18 ಆರೋಪಿಗಳಿದ್ದಾರೆ. ಕೊಲೆಯಾದ ಬಿಕ್ಲು ಶಿವನ ತಾಯಿ ಬೈರತಿ ಬಸವರಾಜ ವಿರುದ್ಧ ದೂರು ನೀಡಿಲ್ಲ ಎಂದು ಹೇಳಿದ್ದಾರೆ. 7-8 ಆರೋಪಿಗಳು ಮಾತ್ರ ಕೊಲೆಯಾದ ವ್ಯಕ್ತಿಗೆ ಪರಿಚಿತರು.
ಪೊಲೀಸರು ಅನುಮಾನದ ಮೇಲೆ ಬೈರತಿ ಬಸವರಾಜ ಹೆಸರನ್ನು ಪ್ರಕರಣದಲ್ಲಿ ಸೇರಿಸಿ 5ನೇ ಆರೋಪಿ ಮಾಡಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ ಪಾತ್ರವಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಸಿಐಡಿ ಪೊಲೀಸರ ಆಕ್ಷೇಪಣೆ ಮತ್ತು ಬೈರತಿ ಬಸವರಾಜ ಪರ ವಕೀಲರ ವಾದ ಆಲಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಆದ್ದರಿಂದ ಶಾಸಕ ಬೈರತಿ ಬಸವರಾಜ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ನಿರೀಕ್ಷಣಾ ಜಾಮೀನು ಪಡೆಯಲು ಹೈಕೋರ್ಟ್ ಮೊರೆ ಹೋಗಲು ತಯಾರಿ ನಡೆಸಿದ್ದಾರೆ.
ಕರ್ನಾಟಕ ಹೈಕೋರ್ಟ್‌ಗೆ ಕ್ರಿಸ್‌ಮಸ್ ರಜೆ ಇದೆ. ಆದ ಕಾರಣ ಇಂದು ಅರ್ಜಿ ಸಲ್ಲಿಕೆ ಮಾಡಿದರೂ ಸಹ ರಜಾ ಕಾಲದ ಪೀಠ ಡಿಸೆಂಬರ್ 26ರಂದು ಬೈರತಿ ಬಸವರಾಜ ಅರ್ಜಿ ವಿಚಾರಣೆ ನಡೆಸಬೇಕಿದೆ. ಅಷ್ಟರಲ್ಲಿ ಶಾಸಕರನ್ನು ಪೊಲೀಸರು ಬಂಧಿಸುವ ಸಾಧ್ಯತೆಯೂ ಇದೆ.
ಜುಲೈ 15ರಂದು ಭೂ ವಿವಾದದ ಹಿನ್ನಲೆಯಲ್ಲಿ ಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಭಾರತಿ ನಗರ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದರು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಸಿಐಡಿ ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಪ್ರಕರಣದಲ್ಲಿ ಬೈರತಿ ಬಸವರಾಜ 5ನೇ ಆರೋಪಿ. ಪ್ರಕರಣದಲ್ಲಿ ಬಂಧನ ಭೀತಿಯಿಂದ ಶಾಸಕ ಬೈರತಿ ಬಸವರಾಜ ತಲೆಮರೆಸಿಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


