ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ರಾಜ್ಯ ಸರ್ಕಾರವು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಮಹತ್ವದ ಕೊಡುಗೆ ನೀಡಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಪ್ರತಿ ತಿಂಗಳು ಒಂದು ದಿನದ ‘ಋತುಚಕ್ರ ರಜೆ’ (Menstrual Leave) ನೀಡಲು ಸಾರಿಗೆ ಇಲಾಖೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದೆ.
ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಡ್ರೈವರ್‌ಗಳು, ಕಂಡಕ್ಟರ್‌ಗಳು ಹಾಗೂ ಕಚೇರಿ ಸಿಬ್ಬಂದಿ ಸೇರಿದಂತೆ 18 ರಿಂದ 52 ವರ್ಷ ವಯಸ್ಸಿನ ಎಲ್ಲಾ ಅರ್ಹ ಮಹಿಳಾ ನೌಕರರು ಈ ರಜೆಯನ್ನು ಪಡೆಯಬಹುದು.
ರಜೆ ಪಡೆಯಲು ಇರುವ ಪ್ರಮುಖ ಷರತ್ತುಗಳು:
ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರದ (Medical Certificate) ಅಗತ್ಯವಿರುವುದಿಲ್ಲ.
ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳಬೇಕು. ಇದನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (Carry over) ಅವಕಾಶವಿಲ್ಲ.
ಪ್ರತಿ ತಿಂಗಳು ಒಂದು ದಿನ ಮಾತ್ರ ಋತುಚಕ್ರ ರಜೆ ಪಡೆಯಬಹುದು.
ಈ ರಜೆಯನ್ನು ಬೇರೆ ಯಾವುದೇ ರಜೆಗಳೊಂದಿಗೆ (CL ಅಥವಾ ಇತರ ರಜೆ) ಸೇರಿಸಿ ಪಡೆಯುವಂತಿಲ್ಲ.
ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಈ ರಜೆಯನ್ನು ಪ್ರತ್ಯೇಕವಾಗಿಯೇ ನಮೂದಿಸಬೇಕು.
ಮಹಿಳಾ ನೌಕರರ ಆರೋಗ್ಯ ಹಿತದೃಷ್ಟಿ ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ನ್ಯಾಯಾಲಯದಲ್ಲಿಯೂ ಈ ನಿರ್ಧಾರಕ್ಕೆ ಜಯ ಸಿಕ್ಕ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರವು ಈ ಹಿಂದೆ ಸರ್ಕಾರಿ ಮಹಿಳಾ ನೌಕರರಿಗೆ ಈ ಸೌಲಭ್ಯ ಘೋಷಿಸಿತ್ತು. ಇದನ್ನು ಸಾರಿಗೆ ನಿಗಮಗಳಿಗೂ ಅಳವಡಿಸಿಕೊಳ್ಳುವಂತೆ ಬೇಡಿಕೆ ಇತ್ತು. ಈಗ ನಿಗಮಗಳೂ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದು, ಸಾರಿಗೆ ಸಂಸ್ಥೆಯಲ್ಲಿ ಕಠಿಣ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಇದು ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ.
ಬೆಂಗಳೂರು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


