ಉತ್ತರ ಬೆಂಗಳೂರಿನಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಚೀನಾ ಮಾದರಿಯ ರೈಲ್ವೆ ಟರ್ಮಿನಲ್ ನಿರ್ಮಾಣವಾಗಲಿದೆ. ಬೆಂಗಳೂರು ನಗರದ 4ನೇ ಟರ್ಮಿನಲ್ ಇದಾಗಲಿದ್ದು, ಭಾರತದ ಮೊದಲ ಚೀನಾ ಮಾದರಿ ರೈಲ್ವೆ ಟರ್ಮಿನಲ್ ಇದು ಎಂಬ ಹೆಗ್ಗಳಿಕೆ ಪಡೆಯಲಿದೆ.
ಯಲಹಂಕದಲ್ಲಿ ರೈಲ್ವೆ ಗಾಲಿ ಕಾರ್ಖಾನೆ ಇದೆ. ಭಾರತೀಯ ರೈಲ್ವೆಯ ಒಂದು ಪ್ರಮುಖ ಉತ್ಪಾದನಾ ಘಟಕ ಇದಾಗಿದೆ. ಇದಕ್ಕೆ ಸೇರಿದ ಜಾಗದಲ್ಲಿ ಹೊಸ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲು ಪ್ರಸ್ತಾವನೆ ತಯಾರಾಗುತ್ತಿದೆ.
ವಿಮಾನ ನಿಲ್ದಾಣ ಮಾದರಿಯ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಪ್ರಸ್ತಾವನೆ ತಯಾರಿಸುತ್ತಿದೆ. ಈಗಾಗಲೇ ಕೆಎಸ್ಆರ್ ಬೆಂಗಳೂರು, ಬೈಯಪ್ಪನಹಳ್ಳಿ ಮತ್ತು ಯಶವಂತಪುರಲ್ಲಿ ರೈಲ್ವೆ ಟರ್ಮಿನಲ್ ಇದೆ. ಯಲಹಂಕದಲ್ಲಿ ಬೆಂಗಳೂರು ನಗರದ 4ನೇ ಟರ್ಮಿನಲ್ ನಿರ್ಮಾಣವಾಗಲಿದೆ.
ಯೋಜನೆಯ ವಿವರ: ಯಲಹಂಕದಲ್ಲಿರುವ ರೈಲ್ವೆ ಗಾಲಿ ಕಾರ್ಖಾನೆಯ ಬಳಿ 192 ಎಕರೆ ಭೂಮಿ ಇದೆ. ಇದರಲ್ಲಿ 20 ಎಕರೆ ಭೂಮಿಯನ್ನು ಬಳಕೆ ಮಾಡಿಕೊಂಡು ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ 16 ಫ್ಲಾಟ್ ಫಾರಂಗಳು ಇರಲಿವೆ. ಈಗಿರುವ ಯಲಹಂಕ ರೈಲು ನಿಲ್ದಾಣವನ್ನು ಇದಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ಸದ್ಯ ಇರುವ ಯಲಹಂಕ ರೈಲು ನಿಲ್ದಾಣ 5 ಫ್ಲಾಟ್ ಫಾರಂಗಳನ್ನು ಹೊಂದಿದೆ. ಇದಕ್ಕೆ ಹೊಸ ಫ್ಲಾಟ್ ಫಾರಂ ಸೇರಿಸುವ ಜೊತೆಗೆ 15 ಪಿಟ್ ಲೈನ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಒಟ್ಟು 5 ಅಂತಸ್ತಿನ ಕಟ್ಟಡ ಇದಾಗಿರಲಿದೆ.
ನಾವು ವಿಮಾನ ನಿಲ್ದಾಣ ಮಾದರಿ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡುವ ಪ್ರಸ್ತಾವನೆ ತಯಾರು ಮಾಡುತ್ತಿದ್ದೇವೆ. ಭಾರತದಲ್ಲಿ ಮೊದಲ ಬಾರಿಗೆ ಈ ಮಾದರಿ ರೈಲು ಟರ್ಮಿನಲ್ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಆದ್ದರಿಂದ ಹೊಸ ಭೂಮಿಯನ್ನು ಪಡೆದು ಅಭಿವೃದ್ಧಿ ಮಾಡುವುದಕ್ಕೆ ಹೆಚ್ಚು ಅನುದಾನ ಬೇಕಿದೆ. ಇರುವ ರೈಲ್ವೆ ಭೂಮಿಯನ್ನು ಬಳಕೆ ಮಾಡಿಕೊಂಡು ನಾವು ಆದಾಯ ಸಂಗ್ರಹ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲ್ವೆ ಟರ್ಮಿನಲ್‌ಗೆ ಪ್ರವೇಶವನ್ನು ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ ಮೂಲಕ ನೀಡಲಾಗುತ್ತದೆ. ಅಲ್ಲದೇ ಟರ್ಮಿನಲ್‌ಗೆ ಕೊಗಿಲು ಕ್ರಾಸ್ ಬಳಿ (ನೀಲಿ ಮಾರ್ಗ)ದ ನಮ್ಮ ಮೆಟ್ರೋ ನಿಲ್ದಾಣದಿಂದ ಸಂಪರ್ಕನ್ನು ನೀಡಲು ಯೋಜನೆಯನ್ನು ತಯಾರು ಮಾಡಲಾಗುತ್ತಿದೆ.
ಟರ್ಮಿನಲ್‌ನಲ್ಲಿ ಆಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಪ್ರಯಾಣಿಕರ ಆಗಮನ/ ನಿರ್ಗಮನಕ್ಕೆ ಪ್ರತ್ಯೇಕ ಪಥವನ್ನು ಮಾಡಲಾಗುತ್ತದೆ. ಟಿಕೆಟ್ ಕೌಂಟರ್, ಕಾಯುವಿಕೆ ಕೊಠಡಿ, ಪಾರ್ಕಿಂಗ್, ವಾಣಿಜ್ಯ ಸಂಕೀರ್ಣಗಳು ಮುಂತಾದವುಗಳನ್ನು ಟರ್ಮಿನಲ್ ಒಳಗೊಂಡಿರಲಿದೆ.
ಯಲಹಂಕದಲ್ಲಿ ರೈಲ್ವೆ ಗಾಲಿ ಕಾರ್ಖಾನೆ ಮತ್ತು ಈಗಿರುವ ರೈಲು ನಿಲ್ದಾಣವನ್ನು ಬಿಟ್ಟು ಸುಮಾರು 3 ಎಕರೆ ಖಾಸಗಿ ಭೂಮಿ ಯೋಜನೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ರೈಲ್ವೆ ಟರ್ಮಿನಲ್ ಯೋಜನಾ ವೆಚ್ಚ ಎಷ್ಟಾಗಲಿದೆ? ಎಂದು ಅಂದಾಜಿಸಲಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಮಾದರಿಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಅಧಿಕಾರಿಗಳಿ ವಿವರಿಸಿದ್ದಾರೆ.
ನೈಋತ್ಯ ರೈಲ್ವೆ ಬೆಂಗಳೂರು ವಲಯ ಈ ಮಾದರಿ ಟರ್ಮಿನಲ್ ನಿರ್ಮಾಣದ ಪ್ರಸ್ತಾವನೆ ತಯಾರು ಮಾಡುತ್ತಿದೆ. ಇದನ್ನು ರೈಲ್ವೆ ಬೋರ್ಡ್‌ಗೆ ಸಲ್ಲಿಕೆ ಮಾಡಿ ಅಂತಿಮ ಒಪ್ಪಿಗೆ ಪಡೆಯಬೇಕಿದೆ. ಬೆಂಗಳೂರಿನಲ್ಲಿ ಭೂಮಿಯ ಬೆಲೆ ಅಧಿಕವಾಗಿದೆ. ಆದರೆ ನಗರದಲ್ಲಿ ರೈಲ್ವೆ ಟರ್ಮಿನಲ್‌ಗಳ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


