ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ತಮ್ಮ ಹೋಂ ಸ್ಟೇ ಕುರಿತಂತೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ( rupesh rajanna ) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ತಾವು ಹೋಂ ಸ್ಟೇಯನ್ನು ಸರ್ಕಾರದ ನಿಯಮಾನುಸಾರ ನಿರ್ಮಿಸಿದ್ದು ಯಾವುದೇ ಅಕ್ರಮ ಮಾಡಿಲ್ಲ, ಅಲ್ಲದೇ ಪರವಾನಗಿ ಪಡೆದು, ಅಗತ್ಯವಾದ ಅನುಮತಿಗಳನ್ನು ಪಡೆದು ನಿರ್ಮಿಸಿರುವುದಾಗಿ ತಿಳಿಸಿದ್ದರು. ಆದರೆ ರೂಪೇಶ್ ರಾಜಣ್ಣ ಇದರ ವಿರುದ್ಧ ಆರೋಪ ಮಾಡಿದ್ದು, ಅಕ್ರಮವಾಗಿ ಹೋಂ ಸ್ಟೇ ನಿರ್ಮಿಸಿರುವುದಾಗಿ ಇಲ್ಲದ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಕಿಡಿಕಾರಿದ್ದರು.
ಇದೇ ವೇಳೆ ರೂಪೇಶ್ ರಾಜಣ್ಣ ಕನ್ನಡಪರ ಹೋರಾಟಗಾರ ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಾರೆ ಎಂದೂ ಸಹ ಸರ್ಫರಾಜ್ ಖಾನ್ ಆರೋಪ ಮಾಡಿದ್ದರು. ಇದರಿಂದ ಕುಪಿತಗೊಂಡ ರೂಪೇಶ್ ರಾಜಣ್ಣ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದರು. ಅಲ್ಲದೇ ನೇರವಾಗಿ ಭೇಟಿಯಾಗಿ ಮಾತನಾಡುವ ಸವಾಲನ್ನೂ ಸಹ ಹಾಕಿದ್ದರು. ತನ್ನ ತಪ್ಪಿಲ್ಲ, ಅದನ್ನು ಸಾಬೀತುಪಡಿಸದೇ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
ಅದರಂತೆ ನಿನ್ನೆ ( ಜೂನ್ 24 ) ಜಮೀರ್ ಅಹ್ಮದ್ ಖಾನ್ ಅವರ ಸರ್ಕಾರಿ ಮನೆಗೆ ರೂಪೇಶ್ ರಾಜಣ್ಣ ಆಗಮಿಸಿದ್ದರು. ಆದರೆ ಆರೋಪ ಮಾಡಿದ್ದ ಸರ್ಫರಾನ್ ಖಾನ್ ರೂಪೇಶ್ ರಾಜಣ್ಣ ಅವರನ್ನು ಭೇಟಿಯಾಗಿಲ್ಲ. ಬದಲಾಗಿ ಪೊಲೀಸರು ರೂಪೇಶ್ ರಾಜಣ್ಣ ಹಾಗೂ ಸಂಗಡಿಗರನ್ನು ವಶಕ್ಕೆ ಪಡೆದರು.
ಹೀಗೆ ಸರ್ಫರಾಜ್ ಖಾನ್ ತಮ್ಮನ್ನು ಭೇಟಿಯಾಗದೇ ಇರುವುದರ ಕುರಿತು ರೂಪೇಶ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಸತ್ಯಕ್ಕೆ ಜಯವಾಗಲೇಬೇಕು, ನ್ಯಾಯ ಸಿಗೋವರೆಗೂ ತಮ್ಮ ಹೋರಾಟವಿರುತ್ತದೆ ಎಂದಿದ್ದಾರೆ. ಇನ್ನು ತಮ್ಮ ಪ್ರಶ್ನೆಗೆ ಉತ್ತರ ಕೊಡದೇ ಎಲ್ಲಿ ಹೋದ್ರಿ ಎಂದು ಸರ್ಫರಾಜ್ ಖಾನ್ ಅವರನ್ನು ಪ್ರಶ್ನಿಸಿರುವ ರೂಪೇಶ್ ರಾಜಣ್ಣ ನಿಮ್ಮ ಮಾತಲ್ಲಿ ಸತ್ಯವಿದ್ದರೆ ಎದುರು ಬಂದು ಮಾತನಾಡಬೇಕಿತ್ತು ಎಂದರು. ನಾಡು ನುಡಿಗಾಗಿ, ನಾಡಿನ ಜನರಿಗಾಗಿ ಜೀವ ಕೊಡಲು ಸಿದ್ಧರಿದ್ದೇವೆ, ನಿಮ್ಮ ಸ್ವಾರ್ಥಕ್ಕಾಗಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಬೇಡಿ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಎಐ ಅಡ್ವೋಕೇಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


