ಬೆಂಗಳೂರು: ನಿನ್ನೆ ( ಅಕ್ಟೋಬರ್ 24 ) ಮುಂಜಾನೆ 3.30ರ ಸಮಯಕ್ಕೆ ಚಿನ್ನತೇಕೂರು ಬಳಿ ನಿನ್ನೆ ( ಅಕ್ಟೋಬರ್ 24 ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಸಿ ಸ್ಲೀಪರ್ ಬಸ್ ಹೊತ್ತಿ ಉರಿದಿದ್ದು, 20 ಮಂದಿ ಸಾವನ್ನಪ್ಪಿದ್ದರು.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಬೈಕ್ ಬಸ್ನ ಡೀಸೆಲ್ ಟ್ಯಾಂಕ್ಗೆ ಗುದ್ದಿದ ಪರಿಣಾಮ ದಿಢೀರನೆ ಬೆಂಕಿ ಹೊತ್ತಿಕೊಂಡು ನಿಮಿಷಗಳಲ್ಲೇ ಇಡೀ ಬಸ್ ಸುಟ್ಟು ಕರಕಲಾಗಿತ್ತು.
ಇನ್ನು ಕಂಡಕ್ಟರ್ ಹಾಗೂ ಡ್ರೈವರ್ ಸೇರಿದಂತೆ ಬಸ್ನಲ್ಲಿ 44 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ 20 ಮಂದಿ ಸಾವನ್ನಪ್ಪಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 12 ಮಂದಿ ಬಸ್ನಿಂದ ಇಳಿದು ಸಾವಿನಿಂದ ಪಾರಾಗಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದರು.
ಹೀಗೆ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಿಂದ ಈ ಮಹಾ ಪ್ರಮಾದ ಸಂಭವಿಸಿದ್ದು, ಬಸ್ ಡ್ರೈವರ್ ಹಾಗೂ ಬೈಕ್ ಸವಾರ ಇಬ್ಬರಲ್ಲಿ ತಪ್ಪು ಯಾರದ್ದು ಎಂಬುದರ ಹಿಂದೆ ಪೊಲೀಸರು ಬಿದ್ದಿದ್ದು, ಇದೇ ಸಂದರ್ಭದಲ್ಲಿ ಅಪಘಾತಕ್ಕೂ ಮುನ್ನ ಬೈಕ್ ಸವಾರ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದಾಗ ನಡೆದುಕೊಂಡ ರೀತಿಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
24 ವರ್ಷದ ಶಿವಶಂಕರ್ ಹಿಂದೆ ತನ್ನ ಸ್ನೇಹಿತನನ್ನು ಕೂರಿಸಿಕೊಂಡು ಪೆಟ್ರೋಲ್ ತುಂಬಿಸಿಕೊಳ್ಳಲು ಬಂದು ಬೈಕ್ ನಿಲ್ಲಿಸಿದ್ದು, ಪೆಟ್ರೋಲ್ ಇಲ್ಲದ ಕಾರಣಕ್ಕೆ ಅಲ್ಲಿಂದ ವಾಪಸ್ ತೆರಳಿದ್ದಾನೆ. ಆದರೆ ವಾಪಸ್ ಹೋಗುವ ಸಮಯದಲ್ಲಿ ಬೈಕನ್ನು ತನ್ನ ಕೈನಿಂತ ವಿರುದ್ಧ ದಿಕ್ಕಿಗೆ ತಿರುಗಿಸಿ ಬಳಿಕ ನಿಯಂತ್ರಣವಿಲ್ಲದೇ ಬೈಕ್ ಚಲಾಯಿಸಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೊ ನೋಡಿದರೆ ಬೈಕ್ ಸವಾರ ಕಂಠಪೂರ್ತಿ ಕುಡಿದಿರುವುದು ಖಚಿತವಾಗಿ ತಿಳಿದುಬರುತ್ತಿದ್ದು, ಹೆಲ್ಮೆಟ್ ಸಹ ಇಲ್ಲದೇ ಚಾಲನೆ ಮಾಡಿದ್ದಾನೆ. ಇನ್ನು ಈತ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


