Wednesday, September 2, 2026
spot_img
More
    spot_img
    HomeLatest newsಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ವಾಪಸ್: 4 ದಿನ ಬೆಂಗಳೂರಲ್ಲಿ ಇದ್ದರೂ ಡಿಕೆಶಿ ಭೇಟಿ ಇಲ್ಲ!

    ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ವಾಪಸ್: 4 ದಿನ ಬೆಂಗಳೂರಲ್ಲಿ ಇದ್ದರೂ ಡಿಕೆಶಿ ಭೇಟಿ ಇಲ್ಲ!

    ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರು ನಗರಕ್ಕೆ ಆಗಮಿಸಿದ್ದರು. ಅವರು ಮಂಗಳವಾರ ವಾಪಸ್ ಆಗುತ್ತಿದ್ದಾರೆ. ನಗರದಲ್ಲಿ ನಾಲ್ಕು ದಿನಗಳ ಕಾಲ ಅವರು ಇದ್ದರೂ ಸಹ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖರ್ಗೆ ಭೇಟಿಯಾಗದಿರುವುದು ಅಚ್ಚರಿ ಮೂಡಿಸಿದೆ.

    Advertisement

    ನವೆಂಬರ್ 22ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ‌ ಖರ್ಗೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ, ಸಮಾಲೋಚನೆ ನಡೆಸಿದ್ದರು. ವಿವಿಧ ಸಚಿವರು, ಶಾಸಕರು ಖರ್ಗೆ ಭೇಟಿಯಾಗಿದ್ದರು.

    ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಥವ ಅವರ ಸಹೋದರ ಡಿ.ಕೆ.ಸುರೇಶ್ ಖರ್ಗೆ ಅವರನ್ನು ಭೇಟಿಯಾಗಲೇ ಇಲ್ಲ. ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಲು ಡಿ.ಕೆ.ಶಿವಕುಮಾರ್ ಬಣದ ಶಾಸಕರು ಪ್ರಯತ್ನ ನಡೆಸಿದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೂ ಏಕೆ ಡಿ.ಕೆ.ಶಿವಕುಮಾರ್ ಖರ್ಗೆ ಭೇಟಿಯಾಗಿಲ್ಲ? ಎಂಬುದು ಸದ್ಯದ ಪ್ರಶ್ನೆ.

    ಬೆಂಗಳೂರಲ್ಲೇ ಇದ್ದ ಡಿ.ಕೆ.ಶಿವಕುಮಾರ್: ಮಲ್ಲಿಕಾರ್ಜುನ‌ ಖರ್ಗೆ ಶುಕ್ರವಾರ ರಾತ್ರಿ ಬೆಂಗಳೂರು ನಗರಕ್ಕೆ ಬಂದಾಗಿನಿಂದಲೂ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರದಲ್ಲೇ ಇದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎರಡು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ.

    ಚಿಕ್ಕಬಳ್ಳಾಪುರ ಬಿಟ್ಟರೆ ಹೊರಗಿನ ಜಿಲ್ಲೆಗೆ ಎಲ್ಲೂ ಸಹ ಕಾರ್ಯಕ್ರಮಕ್ಕಾಗಿ ಪ್ರವಾಸವನ್ನು ಡಿ.ಕೆ.ಶಿವಕುಮಾರ್ ಮಾಡಿಲ್ಲ. ಆದರೂ ಸಹ ಮಲ್ಲಿಕಾರ್ಜುನ‌ ಖರ್ಗೆ ಭೇಟಿ ಮಾಡದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಹಿಂದಿನ ವಾರ ದೆಹಲಿಯಲ್ಲಿ ಸಿದ್ದರಾಮಯ್ಯ, ಖರ್ಗೆ ಭೇಟಿ ಮಾಡಿದ್ದರು. ಆದರೆ ಖರ್ಗೆ ಭೇಟಿಯಾಗಿರಲಿಲ್ಲ.

    ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯದ ವರದಿಯೊಂದಿಗೆ ದೆಹಲಿಗೆ ವಾಪಸ್ ಆಗಿದ್ದಾರೆ. ಈಗಾಗಲೇ ಅವರು ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಹ ದೆಹಲಿಗೆ ಮರಳಿದ್ದು, ರಾಹುಲ್ ಭೇಟಿ ಮಾಡಿ ಖರ್ಗೆ ವರದಿ ನೀಡುವ ನಿರೀಕ್ಷೆ ಇದೆ.

    ರಾಹುಲ್ ಗಾಂಧಿ ಆಪ್ತರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೋಮವಾರ ಸಂಜೆ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಎಐಸಿಸಿ ಸೂಚನೆ ಹಿನ್ನಲೆಯಲ್ಲಿಯೇ ಅವರು ಆಗಮಿಸಿದ್ದಾರೆಯೇ? ಎಂಬುದು ಇನ್ನೂ ತಿಳಿದುಬರಬೇಕಿದೆ. ಅವರು ರಾಜ್ಯ ರಾಜಕೀಯವನ್ನು ಚೆನ್ನಾಗಿ ಬಲ್ಲರು. ಆದ್ದರಿಂದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

    ಡಿ.ಕೆ.ಶಿವಕುಮಾರ್ ಭೇಟಿಯಾಗದ ಕಾರಣ ಅವರಿಗೆ ನೀಡಬೇಕಿರುವ ಸಂದೇಶವನ್ನು ಖರ್ಗೆ ಸಚಿವ ಕೆ.ಜೆ.ಜಾರ್ಜ್ ಮೂಲಕ ಕಳಿಸಿದ್ದಾರೆ ಎಂಬ ಮಾಹಿತಿ ಇದೆ. ಭಾನುವಾರ ಸಿಎಂ ಸಿದ್ದರಾಮಯ್ಯ, ಖರ್ಗೆ ಅವರನ್ನು ಕೆ.ಜೆ.ಜಾರ್ಜ್ ಭೇಟಿಯಾಗಿದ್ದರು. ರಾತ್ರಿ ಜಾರ್ಜ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದರು.

    ಸಿಎಂ ಸಿದ್ದರಾಮಯ್ಯ, “ಸರ್ಕಾರದಲ್ಲಿ ಯಾವುದೇ ಬದಲಾವಣೆ ಮಾಡುವ ಸಂಬಂಧ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಬೇಕು” ಎಂದು ಹೇಳಿದ್ದಾರೆ.

    “ಹೈಕಮಾಂಡ್ ಅನ್ನು ಐದು ತಿಂಗಳ ಹಿಂದೆ ಭೇಟಿಯಾದಾಗ ಸಚಿವ ಸಂಪುಟ ಪುನರ್ ರಚನೆ ಮಾಡಲು ಸೂಚನೆ ನೀಡಿದ್ದರು. ನಾನು ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇನೆ” ಎಂದು ತಿಳಿಸಿದ್ದಾರೆ.

    ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ದೆಹಲಿಗೆ ವಾಪಸ್ ಆಗಿದ್ದು ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ರಾಹುಲ್ ಗಾಂಧಿ ಅವರನ್ನು ಸೋಮವಾರ ಮಧ್ಯಾಹ್ನ ಭೇಟಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ರಾಹುಲ್ ಭೇಟಿಗೆ ಸಮಯ ಸಿಕ್ಕಿದರೆ ದೆಹಲಿಗೆ ತೆರಳುವ ನಿರೀಕ್ಷೆ ಇದೆ.

    ಡಿ.ಕೆ.ಶಿವಕುಮಾರ್ ಮೌನವಾಗಿಯೇ ಕಾರ್ಯತಂತ್ರ ಹಣೆಯುತ್ತಿದ್ದಾರೆಯೇ? ಅಥವ ಹೈಕಮಾಂಡ್‌ಗೆ ತಮಗೆ ಇರುವ ಶಾಸಕರ ಬಲವನ್ನು ಸಾಬೀತುಪಡಿಸಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆಯೇ? ಎಂಬುದು ರಾಜ್ಯ ರಾಜಕೀಯದ ಚರ್ಚೆಯ ವಿಚಾರವಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading