ಕರ್ನಾಟಕ ಸರ್ಕಾರ ಅನರ್ಹ ಪಡಿತರ ಚೀಟಿ ಹೊಂದಿರುವವರನ್ನು ಗುರುತಿಸಲು ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಗುರುತು ಮಾಡಿರು ಒಟ್ಟು ಶಂಕಸ್ಪಾದ ಪಡಿತರ ಚೀಟಿಗಳ ಸಂಖ್ಯೆ 7,76,206 ಎಂದು ಸರ್ಕಾರ ಹೇಳಿದೆ.
ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ ನರಸಿಂಹಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ (ಆಹಾರ-1&2) ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ಆದ್ಯತಾ ಪಡಿತರ ಚೀಟಿಗಳನ್ನು (PHH) ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ನಿಯಮಾನುಸಾರ ಕ್ರಮಕೈಗೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ವಿವಿಧ ಆದೇಶಗಳನ್ನು ಉಲ್ಲೇಖಿಸಲಾಗಿದೆ.
ಪ್ರಸ್ತಾವನೆ: ಆದೇಶಗಳಲ್ಲಿ ಸಾರ್ವಜನಿಕ ವಿತರಣಾ ಪದ್ಧತಿತಿಯಲ್ಲಿ ಆದ್ಯತೇತರ ಕುಟುಂಬಗಳನ್ನು ಗುರುತಿಸಲು ಹೊರಗಿಡುವ ಮಾನದಂಡಗಳನ್ನು (Exclusion criteria) ಹೊರಡಿಸಲಾಗಿದೆ. ಮಾನದಂಡಗಳಲ್ಲಿ ಸೃಷ್ಟೀಕರಿಸಿರುವಂತೆ ಪಡಿತರ ಚೀಟಿ ವಿತರಿಸಲಾಗುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರವು ಎನ್‌ಎಫ್‌ಎಸ್ ಮಿತಿಯನ್ನು 4,01,93,000ಕ್ಕೆ ನಿಗದಿಪಡಿಸಿದೆ. ಆದಾಗ್ಯೂ, ದಿನಾಂಕ 25.08.2025ಕ್ಕೆ ಇರುವಂತೆ ರಾಜ್ಯದಲ್ಲಿ ಒಟ್ಟು 4,54,00,838 ಪಡಿತರ ಫಲಾನುಭವಿಗಳಿದ್ದು ಕೇಂದ್ರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಫಲಾನುಭವಿಗಳಿರುತ್ತಾರೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿರುವ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಅನರ್ಹ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ಪತ್ತೆ ಹಚ್ಚಿ ಸದರಿ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಮಾರ್ಪಡಿಸಿದಲ್ಲಿ, ಅಷ್ಟೇ ಪ್ರಮಾಣದ ಆದ್ಯತಾ ಪಡಿತರ ಚೀಟಿಗಳನ್ನು (PHH) ಬಡತನ ರೇಖೆಗಿಂತ ಕೆಳಗಿರುವ ಅರ್ಹ ನಾಗರಿಕರಿಗೆ ವಿತರಿಸಬಹುದಾಗಿದೆ. ಆದ್ದರಿಂದ ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ಸದರಿ ಅನರ್ಹ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗುತ್ತದೆ.
ಆದ್ಯತಾ ಪಡಿತರ ಚೀಟಿಗ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸದರಿಯವರು ಹೊಂದಿರುವ ಆದ್ಯತಾ ಪಡಿತರ ಚೀಟಿಯನ್ನು ಆದ್ಯತೇತರ ಪಡಿತರ ಚೀಟಿಯನ್ನಾಗಿ ಪರಿವರ್ತಿಸಬಹುದಾಗಿದೆ. ಈ ರೀತಿ ತಾತ್ಕಾಲಿಕವಾಗಿ ಆದ್ಯತೇತರ ಪಡಿತರ ಚೀಟಿಯನ್ನಾಗಿ ಪರಿವರ್ತಿಸಲಾದ ಪಡಿತರದಾರರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ 45 ದಿನಗಳೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ, ತಾಲ್ಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದಲ್ಲಿ ಸದರಿ ಮನವಿ ನಿಯಮಾನುಸಾರ ಪರಿಶೀಲಿಸಿ ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ ಅಂತಹವರ ಆದ್ಯತಾ ಪಡಿತರ ಚೀಟಿ ಮರುಸ್ಥಾಪಿಸಲಾಗುತ್ತದೆ.
ಅನರ್ಹರನ್ನು ಸಮರ್ಪಕವಾಗಿ ಪತ್ತೆ ಹಚ್ಚಿ, ಸದರಿ ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪರಿವರ್ತಿಸಿ, ಅಷ್ಟೇ ಪ್ರಮಾಣದ ಆದ್ಯತಾ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಅರ್ಹ ನಾಗರಿಕರಿಗೆ ವಿತರಿಸುವ ಸಂಬಂಧ ಕೇಂದ್ರ ಸರ್ಕಾರದ ನಿರ್ದೇಶನಗಳಂತೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ. ಆದ್ದರಿಂದ ಈ ಆದೇಶ ಹೊರಡಿಸಲಾಗಿದೆ.
- ಆದ್ಯತಾ ಪಡಿತರ ಚೀಟಿಗಳನ್ನು (PHH) ಹೊಂದಿರುವ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸದರಿಯವರು ಹೊಂದಿರುವ ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸತಕ್ಕದ್ದು.
- ಈ ರೀತಿ ತಾತ್ಕಾಲಿಕವಾಗಿ ಆದ್ಯತೇತರ ಪಡಿತರ ಚೀಟಿಯನ್ನಾಗಿ (NPHH) ಪರಿವರ್ತಿಸಲಾದ ಪಡಿತರದಾರರು ಆದ್ಯತಾ ಪಡಿತರ ಚೀಟಿ ಹೊಂದಲು (PHH) ಅರ್ಹರಾಗಿದ್ದಲ್ಲಿ 45 ದಿನಗಳೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದಲ್ಲಿ ಸದರಿ ಮನವಿಯನ್ನು ಪರಿಶೀಲಿಸಿ ಆದ್ಯತಾ ಪಡಿತರ ಚೀಟಿ ಹೊಂದಲು ನಿಯಮಾನುಸಾರ ಅರ್ಹರಿದ್ದಲ್ಲಿ ಅಂತಹವರ ಆದ್ಯತಾ ಪಡಿತರ ಚೀಟಿಯನ್ನು ಮರುಸ್ಮಾಪಿಸತಕ್ಕದ್ದು.
- ಅನರ್ಹರು ಹೊಂದಿರುವ ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸಿದ ನಂತರ ಯಾವುದೇ ಆಕ್ಷೇಪಣೆ ಸ್ವೀಕೃತವಾಗದೇ ಇದ್ದಲ್ಲಿ ಅಂತಹ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳಾಗಿ ಮುಂದುವರೆಸತಕ್ಕದ್ದು.
- ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವ ಅನರ್ಹರನ್ನು ಪತ್ತೆ ಹಚ್ಚಿ, ಅವುಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಮಾರ್ಪಡಿಸಿದ ನಂತರ ಅಷ್ಟೇ ಸಂಖ್ಯೆಯ ಆದ್ಯತಾ ಪಡಿತರ ಚೀಟಿಗಳನ್ನು ಹೊಸದಾಗಿ ಅರ್ಹ ಫಲಾನುಭವಿಗಳಿಗೆ ನೀಡಲು ಕ್ರಮವಹಿಸತಕ್ಕದ್ದು.
ಕೇಂದ್ರ ಸರ್ಕಾರವು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ ಈ ಕೆಳಕಂಡ ಪಡಿತರ ಚೀಟಿಗಳನ್ನು ಅನರ್ಹ ಪಡಿತರ ಚೀಟಿಗಳೆಂದು ಗುರುತಿಸಿ ಮಾಹಿತಿಯನ್ನು ಹಂಚಿಕೊಂಡಿದೆ.
- CBDT ಆದಾಯ ಗುಂಪಿನ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳು. 5,80,415.
- ಬೇರೆ ರಾಜ್ಯದಲ್ಲಿಯು ಪಡಿತರ ಚೀಟಿಯ ಹೊಂದಿರುವ ಫಲಾನುಭವಿಗಳು. 73,859.
- 12 ತಿಂಗಳಿಂದ ಪಡಿತರ ಪಡೆಯದವರ ಫಲಾನುಭವಿಗಳ ಸಂಖ್ಯೆ. 40,833.
- PM-KISAN ಯೋಜನೆ ಅಡಿ 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ಫಲಾನುಭವಿ ಸಂಖ್ಯೆ. 34,710.
- ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು. 21,402.
- 6 ರಿಂದ 12 ತಿಂಗಳ ತನಕ ಪಡಿತರ ಪಡೆಯದವರ ಫಲಾನುಭವಿ ಸಂಖ್ಯೆ. 17,414.
- GSTN ಹೊಂದಿರುವ ಒಟ್ಟು 25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿರುವ ಫಲಾನುಭವಿ. 2,695.
- 100 ವರ್ಷ ಮೇಲ್ಪಟ್ಟ ಫಲಾನುಭವಿಗಳು. 2,050.
- ಆಧಾರ್ ಸ್ಥಿತಿಯಲ್ಲಿನ ಮೃತ ವ್ಯಕ್ತಿಗಳ ಸಂಖ್ಯೆ. 1,452.
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಸದಸ್ಯ ಫಲಾನುಭವಿಗಳು. 793.
- ಕರ್ನಾಟಕ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು. 430.
- ಸ್ವಂತ ಬಳಕೆಗಾಗಿ 4 ಚಕ್ರದ ವಾಹನ ಹೊಂದಿರುವ ಫಲಾನುಭವಿಗಳು. 153.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


