ಕರ್ನಾಟಕ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸ್ಥಾಪನೆ ಮಾಡಲಿದೆ. ನೂತನ ಜಿಟಿಟಿಸಿ ಕೇಂದ್ರಗಳ ಸ್ಥಾಪನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿದೆ.
ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಜಿಟಿಟಿಸಿ ಮೂಲಕ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಟ್ಟು 32 ಜಿಟಿಟಿಸಿ ಕೇಂದ್ರಗಳಿವೆ. ಈ ಸಾಲಿನ ಬಜೆಟ್‌ನಲ್ಲಿ ಹೊಸ 7 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಕೇಂದ್ರಗಳ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸಲಾಗುತ್ತದೆ.
ಎಲ್ಲಿ ಹೊಸ ಕೇಂದ್ರಗಳ ಸ್ಥಾಪನೆ?: ಇಂಡಿ, ಮಧುಗಿರಿ, ಕಂಪ್ಲಿ, ರಾಯಚೂರು ಗ್ರಾಮೀಣ, ಸಿಂಧನೂರಿನಲ್ಲಿ ಜಿಟಿಟಿಸಿ ಪ್ರಾರಂಭಿಸಲು ಸ್ಥಳ ಗುರುತಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಸಂಡೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಪ್ರಕ್ರಿಯೆ ಆದಷ್ಟು ಬೇಗನೆ ಪ್ರಾರಂಭಿಸಲು ಕ್ರಮ ವಹಿಸಲಾಗುತ್ತದೆ.
ಜಿಟಿಟಿಸಿ ಪ್ರವೇಶಾತಿಯನ್ನು 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಂದ ತರಬೇತಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ವಿದೇಶಿ ಕಂಪನಿಗಳಲ್ಲಿಯೂ ಸೇರಿದಂತೆ ಶೇಕಡ 100 ರಷ್ಟು ನೇಮಕಾತಿ ಆಗುತ್ತಿದೆ ಎನ್ನುವುದು ಧನಾತ್ಮಕ ಅಂಶವಾಗಿದೆ.
ಯಾವ ಕೋರ್ಸ್‌ಗಳಿಗೆ ಬೇಡಿಕೆ ಇದೆ? ಅಂತಹ ಕೋರ್ಸ್‌ಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುತ್ತಿದೆ. ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಜಿಟಿಟಿಸಿ ಉತ್ಪಾದನಾ ಕೇಂದ್ರದಲ್ಲಿ ಇಸ್ರೋದ ಚಂದ್ರಯಾನ ನೌಕೆ ಲೂನಾರ್ ರೋವರ್ ಚಕ್ರದ ಉತ್ಪಾದನೆ ಸೇರಿದಂತೆ ಹಲವು ವೈಮಾನಿಕ ಉಪಕರಣಗಳ ಉತ್ಪಾದನೆ ಮಾಡಲಾಗುತ್ತಿದೆ. ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಜಿಟಿಟಿಸಿ ಒಡಂಬಡಿಕೆ ಮಾಡಿಕೊಳ್ಳಲಿದೆ.
ಗ್ರಾಮೀಣ ಭಾಗದ ಯುವ ಜನತೆಗೆ ಉದ್ಯೋಗ ಕಲ್ಪಿಸಲು ಜಿಟಿಟಿಸಿ ಪ್ರಮುಖ ಪಾತ್ರವನ್ನು ವಹಿಸಲಿವೆ. ಯುವ ಜನರು ಕೌಶಲ್ಯಾಧಾರಿತವಾದ ಕೋರ್ಸ್‌ಗಳನ್ನು ಮಾಡಿ ಉದ್ಯೋಗ ಪಡೆಲು ಅನುಕೂಲವಾಗುವಂತೆ ಇಲ್ಲಿ ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತದೆ.
ಜಿಟಿಟಿಸಿ ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನಿಂದ ಮಾನ್ಯತೆಯನ್ನು ಪಡೆದಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಉತ್ತಮ ಉದ್ಯಮ ಆಧಾರಿತ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ.
ಜಿಟಿಟಿಸಿಯಲ್ಲಿ ಲಭ್ಯವಿರುವ ಕೋರ್ಸ್‌ಗಳು ಡಿಪ್ಲೊಮಾದಲ್ಲಿ ಇರುವಂತಹ ಕೋರ್ಸ್‌ಗಳಿಗಿಂತ ಭಿನ್ನವಾಗಿದೆ. ಜಿಟಿಟಿಸಿಯಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ವಿವಿಧ ಉದ್ಯಮದಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ. ಪ್ರತಿವರ್ಷ ಜಿಟಿಟಿಸಿಗೆ ಸೇರುವ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಔದ್ಯೋಗಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೌಶಲ್ಯಗಳನ್ನು ತಿಳಿದುಕೊಂಡು ಜಿಟಿಸಿಸಿಯಲ್ಲಿ ತಾತ್ವಿಕ ತರಬೇತಿಗಿಂತ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದ್ದರಿಂದ ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಕ್ಕೆ ಸುಲಭವಾಗಿ ಆಯ್ಕೆಯಾಗುತ್ತಾರೆ.
ಜಿಟಿಸಿಸಿಗೆ ಸೇರಲು ಅಭ್ಯರ್ಥಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ರಾಜ್ಯ ಪಠ್ಯಕ್ರಮ, ಸಿಬಿಎಸ್ಇ ಅಥವ ಐಸಿಎಸ್‌ಇ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿರಬೇಕು. ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿನ ಕೋರ್ಟ್‌ಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 33ರಷ್ಟು ಸೀಟು ಕಾಯ್ದಿರಿಸಲಾಗಿದೆ.
ಜಿಟಿಟಿಸಿಯಲ್ಲಿ ಮೂರು ವರ್ಷದ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿ ಕಡ್ಡಾಯವಾಗಿ ಒಂದು ವರ್ಷ ಸಂಬಂಧಿಸಿದ ಕೈಗಾರಿಕೆಗಳಲ್ಲಿ ಇನ್‌ಪ್ಲಾಂಟ್ ತರಬೇತಿಯನ್ನು ಪಡೆಯಬೇಕಿದೆ. ಡಿಸೈನ್, ಪ್ರೊಸೆಸ್ ಪ್ಲಾನಿಂಗ್, ಟೆಸ್ಟಿಂಗ್ ಇತ್ಯಾದಿ ಕೌಶಲ್ಯಗಳನ್ನು ಇಲ್ಲಿನ ಅಭ್ಯರ್ಥಿಗಳು ಹೆಚ್ಚಾಗಿ ಪಡೆದುಕೊಳ್ಳುತ್ತಾರೆ. ಇಲ್ಲಿನ ಕೋರ್ಸ್ ಬಳಿಕ ಹಲವು ವಿದ್ಯಾರ್ಥಿಗಳು ಕಾಯಂ ಕೆಲಸ ಪಡೆಯುತ್ತಾರೆ. ವಿದೇಶದಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿಗಳು ಸಹ ಇದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


