ಬ್ಯಾಡ್ಮಿಂಟನ್ ಆಟದಲ್ಲಿ ಬಳಕೆಯಾಗುವ ಹಕ್ಕಿ ಪುಕ್ಕದ ಶಟಲ್‌ನ ಬೆಲೆಯು ಭಾರತ ಸೇರಿದಂತೆ ನೆರೆಯ ದೇಶಗಳಲ್ಲಿ ಕಳೆದ 1 ವರ್ಷದಲ್ಲಿ ದುಪ್ಪಟ್ಟಾಗಿದೆ. ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಬಳಕೆ ಮಾಡುತ್ತಿದ್ದ ಶಟಲ್‌ಗಳು ಸುಮಾರು 150 ರೂ.ಗೆ ಲಭ್ಯವಾಗುತ್ತಿದ್ದವು. ಈಗ ಇವುಗಳ ಬೆಲೆ 300 ರೂ. ದಾಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಟಲ್‌ಗಳ ಉತ್ಪಾದನೆಯಲ್ಲಾಗಿರುವ ಕೊರತೆ.
ಶಟಲ್ ಉತ್ಪಾದನೆಯ ಜಾಗತಿಕ ಕೇಂದ್ರ ಎನಿಸಿಕೊಂಡಿರುವ ಚೀನದ ಗೈಝ್ಹೌ ಪ್ರಾಂತದಲ್ಲಿ ಉತ್ಪಾದನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಇಲ್ಲಿರುವ ಶಟಲ್ ಉತ್ಪಾದಕ ಕೇಂದ್ರಗಳು ಕಳೆದ ವರ್ಷ ತಿಂಗಳಿಗೆ 30 ಲಕ್ಷ ಶಟಲ್ ಉತ್ಪಾದನೆಯನ್ನು ಮಾಡುತ್ತಿದ್ದವು. ಆದರೆ, ಇದರ ಪ್ರಮಾಣ ಈ ವರ್ಷ 20 ಲಕ್ಷಕ್ಕೆ ಕುಸಿತ ಕಂಡಿದೆ. ಶಟಲ್‌ಗಳನ್ನು ತಯಾರು ಮಾಡಲು ಬೇಕಾದ ಪುಕ್ಕಗಳ ಕೊರತೆ ಉಂಟಾಗಿರುವುದೇ ಶಟಲ್ ಉತ್ಪಾದನೆ ಕುಂಠಿತವಾಗಲು ಕಾರಣ ಎನ್ನಲಾಗಿದೆ.
ಸಾಮಾನ್ಯವಾಗಿ ಒಂದು ಶಟಲ್ ಕಾಕ್ ತಯಾರಿಸಲು 16 ಗರಿಗಳು ಬೇಕಾಗುತ್ತವೆ, ಈ ಕಾಕ್‌ಗಳು ಬಹಳ ಬೇಗ ಹಾಳಾಗುತ್ತದೆ. ಹಾಗಾಗಿ ಕಾಕ್‌ಗಳು ಹೆಚ್ಚು ಬೇಕಾಗುತ್ತದೆ. ಉದಾಹರಣೆಗೆ ಒಂದು ಸಿಂಗಲ್ಸ್ ಪಂದ್ಯಕ್ಕೆ ಸುಮಾರು ಎರಡು ಡಜನ್ ಶಟಲ್ ಕಾಕ್‌ಗಳು ಬೇಕಾಗಬಹುದು.
ಹೆಬ್ಬಾತು ಗರಿಗಳಿಂದಲೇ ಅತ್ಯುತ್ತಮ ಶಟಲ್‌ಗಳನ್ನ ತಯಾರಿ ಮಾಡಲಾಗುತ್ತದೆ. ಚೀನಾದ ಜನರು ಹೆಬ್ಬಾತು ಮತ್ತು ಬಾತುಕೋಳಿ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ. ಹಂದಿ ಮಾಂಸದತ್ತ ಒಲವು ತೋರಿಸಿದ್ದಾರೆ. ಇದರಿಂದ ರೈತರು ಸಹ ಪಕ್ಷಿ ಸಾಕುವುದನ್ನ ಕಡಿಮೆ ಮಾಡಿದ್ದಾರೆ. ಅದಕ್ಕಾಗಿಯೇ ತಯಾರಕರಿಗೆ ಯಾವುದೇ ಗರಿಗಳು ಸಿಗುತ್ತಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


