ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ನಿನ್ನೆ (ಡಿಸೆಂಬರ್ 25) ದೇಶದಾದ್ಯಂತ ಬಿಡುಗಡೆಗೊಂಡಿದೆ. ಬರೋಬ್ಬರಿ ಎರಡೂವರೆ ವರ್ಷಗಳ ಕಿಚ್ಚ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಮೊದಲ ದಿನ ಅಭಿಮಾನಿಗಳು ಹಾಗೂ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿಯೇ ಚಿತ್ರಮಂದಿರಕ್ಕೆ ನುಗ್ಗಿದ್ದಾರೆ.
ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಪಾಸಿಟಿವ್ ವಿಮರ್ಶೆಗಳು ಹರಿದಾಡಿದ್ದರಿಂದ ನಂತರದ ಪ್ರದರ್ಶನಗಳಿಗೂ ಸಹ ಜನರು ಹರಿದುಬಂದಿದ್ದರು. ಪರಿಣಾಮ ಮೊದಲ ದಿನವೇ ಮ್ಯಾಕ್ಸ್ ಸಿನಿ ರಸಿಕರನ್ನು ಚಿತ್ರಮಂದಿರಕ್ಕೆ ಕರೆಸಿಕೊಂಡು ಬ್ಲಾಕ್‌ಬಸ್ಟರ್ ಪಟ್ಟ ಪಡೆದುಕೊಂಡಿದೆ.
ಹೀಗೆ ಮೊದಲ ದಿನ ಅಬ್ಬರದ ಪ್ರದರ್ಶನ ಕಂಡಿರುವ ಮ್ಯಾಕ್ಸ್ ರಿಲೀಸ್ ಡೇ ಎಷ್ಟು ಗಳಿಸಿದೆ ಎಂಬ ಕುತೂಹಲ ಸಿನಿ ರಸಿಕರಲ್ಲಿದ್ದು, ಇದಕ್ಕೆ ಖ್ಯಾತ ಬಾಕ್ಸ್ ಆಫೀಸ್ ಟ್ರಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಕ್ ಉತ್ತರ ನೀಡಿದೆ. ಈ ವೆಬ್‌ಸೈಟ್ ಪ್ರಕಾರ ಮ್ಯಾಕ್ಸ್ ಮೊದಲ ದಿನ ದೇಶದಾದ್ಯಂತ 10.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದು ಈ ವರ್ಷ ಕನ್ನಡ ಸಿನಿಮಾವೊಂದು ಮೊದಲ ಗಳಿಸಿದ ಅತಿಹೆಚ್ಚು ಹಣವಾಗಿದ್ದು, ಈ ಮೂಲಕ ಮ್ಯಾಕ್ಸ್ ದಾಖಲೆ ಬರೆದಿದೆ.
ಇನ್ನು ಕಳೆದ ವಾರ ಬಿಡುಗಡೆಗೊಂಡಿದ್ದ ಉಪೇಂದ್ರ ನಿರ್ದೇಶನದ ಯುಐ ಮೊದಲ ದಿನ ದೇಶದಾದ್ಯಂತ 8 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದನ್ನು ಹಿಂದಿಕ್ಕಿರುವ ಮ್ಯಾಕ್ಸ್ ಸದ್ಯ 2024ರಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


