ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದಿನಿಂದ (ಡಿಸೆಂಬರ್ 26) ಬಾರ್ಡರ್ – ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ ನಡೆಯುತ್ತಿದ್ದು, ಮೊದಲ ದಿನವೇ ವಿರಾಟ್ ಕೊಹ್ಲಿ ಹಾಗೂ ಯುವ ಕ್ರಿಕೆಟಿಗ ಸ್ಯಾಮ್ ಕೊನ್‌ಸ್ಟಾಸ್ ನಡುವೆ ಮೈದಾನದಲ್ಲಿ ಕಿರಿಕ್ ನಡೆದಿದೆ.
ಸ್ಯಾಮ್ ಕೊನ್‌ಸ್ಟಾಸ್ ತನ್ನ ಸ್ಕ್ರೀಜ್‌ಗೆ ಮರಳುವಾಗ ಎದುರುಗಡೆಯಿಂದ ಬರುತ್ತಿದ್ದ ವಿರಾಟ್ ಕೊಹ್ಲಿ ಬೇಕಂತಲೇ ಸ್ಯಾಮ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಇಬ್ಬರ ನಡುವೆಯೇ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ಪರಸ್ಪರ ಗುರಾಯಿಸಿ ನೋಡಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೌದು, ಸ್ಯಾಮ್ ಕೊನ್‌ಸ್ಟಾಸ್ ಸುಮ್ಮನಿದ್ದರೂ ಅನಗತ್ಯವಾಗಿ ವಿರಾಟ್ ಕೊಹ್ಲಿ ನಡೆದುಕೊಳ್ಳಬಾರದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಹುಶಃ ವಿರಾಟ್ ಕೊಹ್ಲಿ ಬೇರೆ ತಂಡದ ಆಟಗಾರರ ಜತೆ ಮೈದಾನದಲ್ಲಿ ಸ್ಲೆಡ್ಜ್ ಮಾಡಿದಾಗಲೆಲ್ಲಾ ಇಷ್ಟು ನೆಗೆಟಿವ್ ಕಾಮೆಂಟ್ ಪಡೆದುಕೊಂಡಿರುವುದು ಇದೇ ಮೊದಲ ಬಾರಿಗೆ ಎನ್ನಬಹುದು.
ಅಷ್ಟೇ ಅಲ್ಲದೇ ಪಂದ್ಯದ ಆರಂಭಕ್ಕೂ ಮುನ್ನ ಸಂದರ್ಶನದಲ್ಲಿ ಭಾಗವಹಿಸಿದ್ದ ಸ್ಯಾಮ್ ಕೊನ್‌ಸ್ಟಾಸ್ ನಿಮ್ಮ ಫೇವರಿಟ್ ಕ್ರಿಕೆಟರ್ ಯಾರು ಎಂಬ ಪ್ರಶ್ನೆ ಎದುರಾದಾಗ ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದ್ದರು. ಈ ವಿಷಯವನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಕ್ರಿಕೆಟ್ ಪ್ರೇಮಿಗಳು ಕೊಹ್ಲಿ ನಡೆಗೆ ಬೇಸರ ಹೊರಹಾಕಿದ್ದಾರೆ.
ಇನ್ನು ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರಂಭಿಕನಾಗಿ ಕಣಕ್ಕಿಳಿದ ಸ್ಯಾಮ್ ಕೊನ್‌ಸ್ಟಾಸ್ 65 ಎಸೆತಗಳಲ್ಲಿ 60 ರನ್ ಗಳಿಸಿ ಔಟ್ ಆಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


