ಹುಬ್ಬಳ್ಳಿ: ಮಲಗಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಮೃತ ಅಯ್ಯಪ್ಪ ಮಾಲಾಧಾರಿಗಳನ್ನು ಅಜ್ಜಾಸ್ವಾಮಿ ಉರ್ಪ್ ನಿಂಗಪ್ಪ ಬೇಪಾರಿ(58), ಹಾಗೂ ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ. ಇನ್ನುಳಿದ ಗಾಯಾಳುಗಳಾದ ರಾಜು ಹರ್ಲಾಪುರ (21), ವಿನಾಯಕ ಬಾತಕೇರ (12), ಪ್ರಕಾಶ ಬಾರಕೇರ (42), ಮಂಜು ತೋರದ (22), ಪ್ರವೀಣ ಚಲವಾದಿ (24), ತೇಜಸ್ ರೆಡ್ಡಿ (26) ಮತ್ತು ಶಂಕರ ರಾಯನಗೌಡ್ರ (29) ಇವರುಗಳ ಸ್ಥಿತಿ ಇನ್ನೂ ಗಂಭೀರವಾಗಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಮೃತರ ಕುಟುಂಬಸ್ಥರು ಮತ್ತು ಅಯ್ಯಪ್ಪ ಮಾಲಾಧಾರಿಗಳು ಸೇರಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮನೆ ಮಕ್ಕಳನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕಿದರು.
ಮೃತ ಅಯ್ಯಪ್ಪ ಮಾಲಾಧಾರಿ ಸಂಜಯ ಸವದತ್ತಿ ದೇಶ ಸೇವೆ ಕನಸು ಕಟ್ಟಿಕೊಂಡಿದ್ದ. ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ. ಇದೇ ಮೊದಲ ಬಾರಿಗೆ ಅಯ್ಯಪ್ಪ ಸೇವೆ ಮಾಡಲು ಮಾಲೆ ಹಾಕಿಕೊಂಡಿದ್ದ. ಕಳೆದ ಮೂವತ್ತು ದಿನಗಳಿಂದ ಅಯ್ಯಪ್ಪನಿಗಾಗಿ ವೃತ ಮಾಡಿದ್ದ. ತಂದೆ-ತಾಯಿಗೆ ಓರ್ವ ಮಗನಾಗಿದ್ದ ಈತ ಕೋವಿಡ್ ಸಮಯದಲ್ಲಿ ತರಕಾರಿ ಮಾರಿ ಕುಟುಂಬ ಸಾಗಿಸಿದ್ದನು. ಸಣ್ಣ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಎಂದು ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಸಂಜಯ ಸವದತ್ತಿ ತಂದೆ ಪ್ರಕಾಶ್ ಕಣ್ಣೀರು ಸುರಿಸಿದರು. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ದುರಂತಕ್ಕೆ ಅಯ್ಯಪ್ಪ ಮಾಲಾಧಾರಿಯೊಬ್ಬರ ನಿದ್ದೆಗಣ್ಣು ಕಾರಣ ಎಂದು ಹೇಳಲಾಗಿದ್ದು, ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್ಗೆ ತಾಗಿ ಅದು ಉರುಳಿದೆ. ಈ ವೇಳೆ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


