ಹೈದರಾಬಾದ್: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಇತರೆ ಕೆಲ ನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ತೆಲುಗಿನ ಖ್ಯಾತ ಹಾಸ್ಯನಟ ಪೋಸಾನಿ ಕೃಷ್ಣ ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೋಸಾನಿ ಕೃಷ್ಣ ಮುರಳಿ ಅವರು ತೆಲುಗು ಚಿತ್ರರಂಗದ ಜನಪ್ರಿಯ ನಟರಾಗಿರುವ ಜೊತೆಗೆ ವೈಸಿಆರ್ ಪಕ್ಷದ ಮುಖಂಡರೂ ಆಗಿದ್ದಾರೆ. ಕೃಷ್ಣ ಮುರಳಿಯನ್ನು ಪವನ್ ಕಲ್ಯಾಣ್ ಸೇರಿದಂತೆ ಇತರೆ ಕೆಲ ನಾಯಕರ ಬಗ್ಗೆ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ.
ಪೋಸಾನಿ ಕೃಷ್ಣ ಮುರಳಿ ಈ ಹಿಂದೆ ಹಲವು ಬಾರಿ ನಟ ಪವನ್ ಕಲ್ಯಾಣ್ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದರು. ಪವನ್ ಕಲ್ಯಾಣ್ ಪತ್ನಿಯ ಬಗ್ಗೆಯೂ ಅವರು ಅಪಹಾಸ್ಯ ಮಾಡಿದ್ದರು.
ಪವನ್ ಕಲ್ಯಾಣ್ ಪತ್ನಿಗೆ ಕೆಲಸದವರ ಜೊತೆ ಅಕ್ರಮ ಸಂಬಂಧ ಇದೆ, ಆಕೆ ವೇಶ್ಯೆ ಎಂದೆಲ್ಲ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮುರಳಿ ಮಾತನಾಡಿದ್ದರು. ಆಗೆಲ್ಲ ಜನಸೇನಾ ಕಾರ್ಯಕರ್ತರು ಮುರಳಿ ವಿರುದ್ಧ ದಾಳಿಗಳನ್ನು ಸಹ ಮಾಡಿದ್ದರು. ಇತ್ತೀಚೆಗೆ ಅವರು ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ಮಾಡಿದ್ದರು ಎನ್ನಲಾಗುತ್ತಿದೆ.
ಹೈದರಾಬಾದ್‍ನ ಯೆಲ್ಲರೆಡ್ಡಿ ಗುಡಾನಲ್ಲಿನ ನ್ಯೂ ಸೈನ್ಸ್ ಕಾಲೊನಿಯಲ್ಲಿ ವಾಸವಿರುವ ಮುರಳಿ ಮನೆಗೆ ನಿನ್ನೆ ರಾತ್ರಿ ದಾಳಿ ನಡೆಸಿದ ಅನ್ನಮಯ ಜಿಲ್ಲೆ ಎಸ್‍ಪಿ ಬಿ ಕೃಷ್ಣ ರಾವ್ ನೇತೃತ್ವದ ಪೊಲೀಸ್ ತಂಡ ಮುರಳಿಯವರನ್ನು ಬಂಧಿಸಿದೆ. ಈ ವೇಳೆ ನಟ ಮುರಳಿ, ಪೊಲೀಸರೊಟ್ಟಿಗೆ ವಾಗ್ವಾದ ಸಹ ಮಾಡಿದ್ದಾರೆ. ನಾನು ಬರುವುದಿಲ್ಲ, ನನಗೆ ಆಪರೇಷನ್ ಆಗಿದೆ. ಚಿಕಿತ್ಸೆ ಪಡೆದುಕೊಂಡು ಬರುತ್ತೇನೆ ಎಂದರು ಕೇಳದೆ ಅವರನ್ನು ಬಂಧಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


