ಸದ್ಯ ಕನ್ನಡ ಹಾಗೂ ಮರಾಠಿ ಭಾಷಾ ವಾರ್ ಜೋರಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಮಾತನಾಡದ ಕಾರಣಕ್ಕೆ ಬಾಳೆಕುಂದ್ರಿ ಯುವಕರು ಹಲ್ಲೆ ಮಾಡಿದ ನಂತರ ಈ ಕದನ ಶುರುವಾಗಿದೆ.
ರಾಜ್ಯದಲ್ಲಿ ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿದರೆ, ಅತ್ತ ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಸಿ ಬಳಿದು ವಿಕೃತಿ ಮೆರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಸಹ ಭಾಷಾ ಕಿತ್ತಾಟಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಹೆಚ್ಚಾಗಿ ಹರಿದಾಡುತ್ತಿವೆ.
ಇನ್ನು ಕನ್ನಡದ ಯುಟ್ಯೂಬರ್ಸ್ ಹಾಗೂ ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ಸ್ ಕನ್ನಡಿಗರಿಗೆ ಬೆಂಬಲ ಕೊಡಬೇಕು, ಕಂಡಕ್ಟರ್ ಮೇಲೆ ನಡೆದ ಹಲ್ಲೆಯ ಬಗ್ಗೆ ದನಿ ಎತ್ತಬೇಕೆಂದು ಕನ್ನಡ ಪರ ಆನ್‌ಲೈನ್ ಹೋರಾಟಗಾರ ಹರೀಶ್ ತಮ್ಮ ಮಿನಿ ರೇಡಿಯೊ ಚಾನೆಲ್‌ನಲ್ಲಿ ಕೇಳಿಕೊಂಡಿದ್ದರು.
ಆದರೆ ಇದರಿಂದ ಕೆರಳಿದ ಉಡಾಳ್ ಪವ್ಯಾ ಎಂಬ ಕಂಟೆಂಟ್ ಕ್ರಿಯೇಟರ್ ಹರೀಶ್ ಅವರ ವರ್ಣಭೇದ ಮಾಡಿದ್ದ. ಕಪ್ಪು ಬಣ್ಣದ ಬಟ್ಟೆಯನ್ನು ಮುಖಕ್ಕೆ ಹಾಕಿಕೊಂಡು ಹರೀಶ್ ಕಪ್ಪು ಎಂದು ಹೀಯಾಳಿಸಿ ಮಾತನಾಡುವುದಕ್ಕೆ ಇದಕ್ಕಿಂತ ಗಂಭೀರವಾದ ಬೇರೆ ವಿಷಯಗಳಿವೆ, ಅದರ ಬಗ್ಗೆ ಮಾತನಾಡು, ಈ ರೀತಿ ವಿಡಿಯೊ ಮಾಡಿ ಬಿಗ್‌ಬಾಸ್‌ಗೆ ಹೋಗಬೇಕೆಂದಿದ್ಯಾ, ಸುಮ್ಮನೆ ತಲೆ ತಿನ್ನಬೇಡ ಎಂದು ಕೆಟ್ಟ ಪದವೊಂದನ್ನು ಬಳಸಿ ಕಿಡಿಕಾರಿದ್ದ.
ಹೀಗೆ ಉಡಾಳ್ ಪವ್ಯಾನ ಈ ದುರಹಂಕಾರದ ಸ್ಟೋರಿ ವೈರಲ್ ಆಗುತ್ತಿದ್ದಂತೆಯೇ ಎಲ್ಲೆಡೆ ಪವ್ಯಾ ವಿರುದ್ಧ ದೊಡ್ಡ ಮಟ್ಟದ ಟೀಕೆ ವ್ಯಕ್ತವಾಗಿದೆ. ಕನ್ನಡಿಗರಿಂದ ಬೆಳೆದು ಕನ್ನಡಕ್ಕೆ ಬೆಂಬಲ ಕೊಡಿ ಎಂದು ಮನವಿ ಮಾಡಿದವರಿಗೆ ಇಂತಹ ಹೀನಾಯ ಪ್ರತಿಕ್ರಿಯೆ ನೀಡಿದ ಪವ್ಯಾ ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ಟ್ರೋಲ್ ಆದರು.
ಹೀಗೆ ತಾನು ಮಾಡಿದ ಪೋಸ್ಟ್‌ನಿಂದ ತನ್ನ ವಿರುದ್ಧ ಇಷ್ಟರಮಟ್ಟಿಗೆ ಜನರು ತಿರುಗಿಬಿದ್ದಿರುವುದನ್ನು ಅರಿತ ಪವ್ಯಾ ವಿಡಿಯೊವೊಂದನ್ನು ಪೋಸ್ಟ್ ಮಾಡಿ ಕೈಮುಗಿದು ಕ್ಷಮೆ ಕೇಳಿದ್ದಾನೆ. ಕನ್ನಡಿಗರು ಹಾಗೂ ತಾನು ನಾಲಿಗೆ ಹರಿಬಿಟ್ಟಿದ್ದ ಹರೀಶ್ ಅವರಿಗೂ ಸಹ ಉಡಾಳ್ ಪವ್ಯಾ ಕ್ಷಮಿಸಿ ಎಂದು ಕೈಮುಗಿದಿದ್ದಾನೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


