ಲಾಹೋರ್: ಇಲ್ಲಿನ ಗಡ್ಡಾಫಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಫೆಬ್ರವರಿ 26) ನಡೆದ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಎಂಟನೇ ಪಂದ್ಯ ಇಂಗ್ಲೆಂಡ್ ಹಾಗೂ ಅಘ್ಘಾನಿಸ್ತಾನ ತಂಡಗಳ ನಡುವಿನ ರೋಚಕ ಹಣಾಹಣಿಯಲ್ಲಿ 8 ರನ್ಗಳ ಹೀನಾಯ ಸೋಲುಂಡ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ ಇಬ್ರಾಹಿಂ ಜದ್ರಾನ್ ಅಬ್ಬರದ 177 ರನ್ಗಳ ಭರ್ಜರಿ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 325 ರನ್ ಕಲೆಹಾಕಿ ಇಂಗ್ಲೆಂಡ್ಗೆ 326 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ತಿಣುಕಾಡಿದ ಇಂಗ್ಲೆಂಡ್ ಅಂತಿಮ ಓವರ್ವರೆಗೂ ಬಂದು 49.5 ಓವರ್ಗಳಲ್ಲಿ 317 ರನ್ಗಳಿಗೆ ಆಲ್ಔಟ್ ಆಗಿ ಭಾರೀ ಮುಖಭಂಗ ಅನುಭವಿಸಿತು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿಯೂ ಸಹ ಸೋತಿದ್ದ ಇಂಗ್ಲೆಂಡ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಗ್ಗರಿಸಿದೆ. ಇನ್ನು ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಬರುವ ಮುನ್ನ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಬಂದಿತ್ತು. ಮೊದಲಿಗೆ ಇಂಗ್ಲೆಂಡ್ 1-4 ಅಂತರದಿಂದ ಟಿ ಟ್ವೆಂಟಿ ಸರಣಿಯನ್ನು ಸೋತರೆ ಬಳಿಕ ನಡೆದ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಸೋತು ವೈಟ್ ವಾಷ್ ಮುಖಭಂಗ ಅನುಭವಿಸಿತ್ತು.
ಈ ಸರಣಿ ಸಂದರ್ಭದಲ್ಲಿ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರನೇ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಬೆನ್ ಡಕೆಟ್ “ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸೋತರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನಾವು ಭಾರತವನ್ನು ಸೋಲಿಸಲಿದ್ದೇವೆ” ಎಂದು ಸವಾಲು ಎಸೆದಿದ್ದರು. ಆದರೆ ಇದೀಗ ಇಂಗ್ಲೆಂಡ್ ಗ್ರೂಪ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿರುವುದು ಬೆನ್ ಡಕೆಟ್ಗೆ ಮುಖಭಂಗವನ್ನುಂಟುಮಾಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


