ಪ್ರಯಾಗ್‌ರಾಜ್‌ನಲ್ಲಿ ನಿನ್ನೆ ನಡೆದ ಶಿವರಾತ್ರಿ ಪುನ್ಯಸ್ನಾನದ ಮೂಲಕ ಬೃಹತ್ ಧಾರ್ಮಿಕ ಸಮ್ಮೇಳನ ಮಹಾಕುಂಭ ಮೇಳಕ್ಕೆ ತೆರೆಬಿದ್ದಿದೆ. 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳ ಸಂಪನ್ನವಾಗಿದೆ.
ಇನ್ನು ಪ್ರಯಾಗ್‌ರಾಜ್‌ನಲ್ಲಿ ನಡೆದ ಅತಿದೊಡ್ಡ ಧಾರ್ಮಿಕ ಸಮ್ಮೇಳನದಲ್ಲಿ ಈವರೆಗೂ 63 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ವಿಶ್ವದಾದ್ಯಂತ ಕುಂಭಮೇಳಕ್ಕೆ ಕೋಟ್ಯಾಂತರ ಜನರು ಭೇಟಿ ನೀಡಿದ್ದಾರೆ.
ಹೀಗೆ ಕೋಟ್ಯಂತರ ಮಂದಿ ಭೇಟಿ ನೀಡಿರುವ ಮಹಾಕುಂಭ ಮೇಳದ ಕುರಿತು ಪರವಿರೋಧಗಳ ಚರ್ಚೆ ಆಗಿದ್ದು, ಕಾಂಗ್ರೆಸ್‌ನ ಹಲವರು ಮಹಾಕುಂಭ ಮೇಳದ ಶುಚಿತ್ವದ ಬಗ್ಗೆ ಟೀಕಿಸಿದರು. ಅಲ್ಲಿನ ಟ್ರಾಫಿಕ್ ಜಾಮ್, ಸಾರ್ವಜನಿಕರ ನೂಕುನುಗ್ಗಲು ಕಂಡು ವ್ಯವಸ್ಥೆ ಸರಿಯಾಗಿ ಆಗಿಲ್ಲ ಎಂದು ಕಿಡಿಕಾರಿದ್ದರು.
ಈ ನಡುವೆಯೂ ಕಾಂಗ್ರೆಸ್‌ನ ಡಿಕೆ ಶಿವಕುಮಾರ್ ಮಾತ್ರ ಇದ್ಯಾವ ಚರ್ಚೆಗೂ ಒಳಪಡದೇ ಪತ್ನಿ ಜೊತೆ ಮಹಾಕುಂಭಮೇಳಕ್ಕೆ ಭೇಟಿ ನೀಡಿದ್ದರು. ತಮ್ಮ ಈ ಭೇಟಿಯ ಬಗ್ಗೆ ನಿನ್ನೆ (ಫೆಬ್ರವರಿ 26) ಉಪಮುಖ್ಯಮಂತ್ರಿ ಡಿಕೆಶಿ ಮಾತನಾಡಿದ್ದು, ಉತ್ತರಪ್ರದೇಶ ಸರ್ಕಾರ ಕುಂಭಮೇಳವನ್ನು ಚೆನ್ನಾಗಿ ನಿಭಾಯಿಸಿತು ಎಂದು ಹೊಗಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಾಕುಂಭಮೇಳದ ಬಗ್ಗೆ ಪ್ರಶ್ನೆ ಎದುರಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಡಿಕೆಶಿ “ನಾನೊಬ್ಬ ಹಿಂದೂ ರೀ.. ನಾನು ಹುಟ್ಟಿದಾಗಿನಿಂದಲೂ ಹಿಂದೂ. ಆದರೆ ನನಗೆ ಎಲ್ಲಾ ಧರ್ಮವೂ ಇಷ್ಟ. ನಾನು ಎಲ್ಲಾ ಧರ್ಮವನ್ನೂ ಪ್ರೀತಿಸುತ್ತೇನೆ ಹಾಗೂ ಎಲ್ಲಾ ಧರ್ಮವನ್ನು ಗೌರವಿಸುತ್ತೇನೆ. ಯಾವ ಧರ್ಮವಾದರೂ ಅಷ್ಟೇ. ನಾನು ಜೈಲಿನಲ್ಲಿದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತುಕೊಂಡೆ. ಮೊನ್ನೆ ಜೈನಮಠಕ್ಕೂ ಹೋಗಿದ್ದೆ, ಅವರ ಕಠಿಣವಾದಂತ ತತ್ವಗಳು. ಅವರ ನಿಲುವು ನನಗೆ ಇಷ್ಟವಾಯಿತು. ಅವರು ಆಶೀರ್ವಾದ ಮಾಡ್ತಾರೆ ಬೇಡ ಅನ್ನೋಕಾಗುತ್ತಾ? ಅದೇ ರೀತಿ ದರ್ಗಕ್ಕೆ ಹೋಗ್ತೀನಿ, ಚರ್ಚ್‌ಗೆ ಹೋಗ್ತೀನಿ. ಅಲ್ಲಿ ಆಶೀರ್ವಾದ ಮಾಡ್ತಾರೆ. ಎಲ್ಲಾ ಸಮುದಾಯದವರೂ ನನ್ನನ್ನು ಇಷ್ಟಪಡ್ತಾರೆ. ಕುಂಭಮೇಳದ ಅನುಭವ ಚೆನ್ನಾಗಿತ್ತು. ಅದನ್ನು ಆಯೋಜಿಸಿದವರಿಗೆ ನನ್ನ ಮೆಚ್ಚುಗೆ. ಏಕೆಂದರೆ ಅಂತಹ ದೊಡ್ಡ ಧಾರ್ಮಿಕ ಸಮ್ಮೇಳನ ನಡೆಸುವುದು ಸುಲಭದ ಮಾತಲ್ಲ. ಸಣ್ಣಪುಟ್ಟ ಅಡೆತಡೆಗಳಾಯಿತು, ಅದರ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


