ನಂಜನಗೂಡು: ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ತುಂಬಿ ಹರಿಯುತ್ತಿದೆ.
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಪರಿಣಾಮ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಕಪಿಲಾ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪರಶುರಾಮ ದೇವಾಲಯ ಕೂಡ ಮುಳುಗಡೆಯಾಗಿದ್ದು, ನಂಜುಂಡೇಶ್ವರನ ದೇವಾಲಯದ ಗೋಪುರದ ಬಳಿಗೆ ಕಪಿಲಾ ನದಿಯ ಪ್ರವಾಹದ ನೀರು ಬಂದಿದೆ. ಕಪಿಲಾ ನದಿಯ ಅಂಚಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಪರಶುರಾಮ ದೇವಾಲಯಕ್ಕೆ ಪ್ರವಾಹದ ನೀರು ನುಗ್ಗಿದ್ದು, ನಂಜನಗೂಡು ನಗರದ ನಂಜುಂಡೇಶ್ವರನ ದೇವಾಲಯದ ಹಿಂಬದಿಯಲ್ಲಿರುವ ತೋಪಿನ ಬೀದಿ, ಒಕ್ಕಲಗೇರಿ, ಹಳ್ಳದ ಕೇರಿಗೆ ಪ್ರವಾಹದ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ.
ಕಪಿಲಾ ನದಿಯ ಪ್ರವಾಹದ ನೀರಿಗೆ ಹದಿನಾರು ಕಾಲು ಮಂಟಪ ಶೇಕಡ ತೊಂಬತ್ತರಷ್ಟು ಮುಳುಗಡೆಯಾಗಿದ್ದು, ತುಂಬಿ ಹರಿಯುತ್ತಿರುವ ನದಿಯಲ್ಲಿ ಭಕ್ತರ ಹುಚ್ಚಾಟ ಮೆರೆದಿದ್ದಾರೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಭಕ್ತರು ಸ್ನಾನ ಮಾಡಲು ಮುಂದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೊಡಗಿನಲ್ಲಿ ಅಬ್ಬರದ ಮಳೆ: ಕೆಆರ್‌ಎಸ್ ಒಳಹರಿವಿನಲ್ಲಿ ಭಾರೀ ಏರಿಕೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


