ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಪಥ ಸಂಚಲನ ಈಗ ರಾಜ್ಯಾದ್ಯಂತ ಚರ್ಚೆಯ ವಿಚಾರ. ಈ ಕುರಿತು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಸಹ ಅರ್ಜಿ ಸಲ್ಲಿಕೆಯಾಗಿದೆ. ನವೆಂಬರ್ 2ರಂದು ಪಥ ಸಂಚಲನ ನಡೆಸಲು ಅವಕಾಶ ನೀಡಬೇಕು ಎಂದು ಆರ್‌ಎಸ್‌ಎಸ್ ಮನವಿ ಮಾಡಿದೆ.
ಚಿತ್ತಾಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ. ಸರ್ಕಾರಿ ಆಸ್ತಿಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಬಳಿಕ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥ ಸಂಚಲನ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ಹೈಕೋರ್ಟ್ ಸೂಚನೆಯಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಕ್ಟೋಬರ್ 28ರಂದು ಶಾಂತಿ ಸಭೆ ಕರೆದಿದ್ದಾರೆ. ಈ ಸಭೆಗೆ 10 ಸಂಘಟನೆಗಳಿಗೆ ಆಹ್ವಾನ ನೀಡಲಾಗಿದೆ. ಆರ್‌ಎಸ್‌ಎಸ್ ಮಾತ್ರವಲ್ಲ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸೇರಿ 10 ಸಂಘಟನೆಗಳು ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಮನವಿ ಸಲ್ಲಿಕೆ ಮಾಡಿವೆ.
ಶಾಂತಿ ಸಭೆಗೆ ನೋಟಿಸ್: ಕಲಬುರಗಿ ಜಿಲ್ಲಾಡಳಿತ ಅಕ್ಟೋಬರ್ 28ರ ಮಂಗಳವಾರ ಶಾಂತಿಸಭೆ ನಡೆಸಲಿದೆ. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಿ, ಆ ಕುರಿತು ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಹೈಕೋರ್ಟ್ ನಿರ್ದೇಶನದಂತೆ ಶಾಂತಿ ಸಭೆಯನ್ನು ಕರೆಯಲಾಗಿದ್ದು, ಪ್ರತಿ ಸಂಘಟನೆಯಿಂದ ಕನಿಷ್ಠ ಮೂರು ಸದಸ್ಯರು ಹಾಜರಾಗಿ ಪಥ ಸಂಚಲನದ ಕುರಿತು ಲಿಖಿತ ಹೇಳಿಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ನವೆಂಬರ್ 2ರಂದು ಪಥ ಸಂಚಲನ ನಡೆಸಲು ಅವಕಾಶ ಕೋರಿ ಆರ್‌ಎಸ್ಎಸ್ ಎರಡು ಬಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಈ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಕೇಳಿದ್ದ ಕೋರ್ಟ್ ಶಾಂತಿ ಸಭೆ ನಡೆಸಿ, ವರದಿ ನೀಡಿ ಎಂದು ಸೂಚನೆ ನೀಡಿತ್ತು. ಅಕ್ಟೋಬರ್ 28ರಂದು ಶಾಂತಿ ಸಭೆ ನಡೆಸಬೇಕು. ಅಕ್ಟೋಬರ್ 30ರಂದು ಜಿಲ್ಲಾಡಳಿತ ಹೈಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ವೇಳೆ ತನ್ನ ನಿಲುವು ತಿಳಿಸಬೇಕು. ಆದ್ದರಿಂದ ಮಂಗಳವಾರ ನಡೆಯುವ ಸಭೆ ಕುತೂಹಲಕ್ಕೆ ಕಾರಣವಾಗಿದೆ.
ಪಥ ಸಂಚಲನಕ್ಕೆ ಅವಕಾಶ ಕೇಳಿ ಆರ್‌ಎಸ್‌ಎಸ್ ಸಲ್ಲಿಸಿದ್ದ ಮನವಿಯನ್ನು ಚಿತ್ತಾಪುರ ಶಹಶೀಲ್ದಾರ್ ಪರಿಶೀಲಿಸಿ, ಅಕವಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದ್ದರಿಂದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿತ್ತು. ಚಿತ್ತಾಪುರ ಪಟ್ಟಣದಲ್ಲಿ ಕೆಲವು ರೀತಿಯ ಉದ್ವಿಗ್ನತೆ ಉಂಟಾಗಿದೆ ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಗಮನಿಸಿದ್ದ ಕೋರ್ಟ್ ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಬೇಕು ಎಂದು ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಅಕ್ಟೋಬರ್ 30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತ್ತು.
ತಹಶೀಲ್ದಾರ್ ಏನು ಹೇಳಿದ್ದರು?; ತಮ್ಮ ವರದಿಯಲ್ಲಿ ತಹಶೀಲ್ದಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನಲೆ ಹಾಗೂ ವಿಜಯದಶಮಿ ಉತ್ಸವದ ಹಿನ್ನಲೆಯಲ್ಲಿ ಚಿತ್ತಾಪುರ ನಗರದಲ್ಲಿ ದಿನಾಂಕ 19-10-2025ರಂದು ಮಧ್ಯಾಹ್ನ 3 ಗಂಟೆಗೆ ಪಥ ಸಂಚಲನ ಹಾಗೂ ವಿಜಯದಶಮಿ ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು ಮನವಿ ಪತ್ರದ ಮೂಲಕ ಅನುಮತಿ ನೀಡಬೇಕೆಂದು ಕೋರಿದ್ದೀರಿ.
ದಿನಾಂಕ 19-10-2025ರಂದು ಚಿತ್ತಾಪುರ ಪಟ್ಟಣದಲ್ಲಿ ನಡೆಯುವ ಆರ್.ಎಸ್.ಎಸ್. ವಿಜಯ ದಶಮಿ ಉತ್ಸವದ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಾಗೂ ಭೀಮ್ ಆರ್ಮಿ ಸಂಘಟನೆಯವರೂ ಕೂಡ ಇದೇ ಮಾರ್ಗದಲ್ಲಿ ದಿನಾಂಕ 19-10-2025 ರಂದು ಕಥ ಸಂಚಲನ ಮಾಡುವುದಾಗಿ ಪತ್ರದ ಮೂಲಕ ತಿಳಿಸಿರುತ್ತಾರೆ. ಆರ್.ಎಸ್.ಎಸ್., ಕಾರ್ಯಕರ್ತನಾದ ದಾನೇಶ ನರೋಣ ಕೆಲವು ದಿನಗಳ ಹಿಂದೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೇದರಿಕೆ ಹಾಕಿದ ಪ್ರಯುಕ್ತ ಬೆಂಗಳೂರಿನ ಸದಾಶಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲದೇ ಈ ಘಟನೆಯನ್ನು ಖಂಡಿಸಿ ಕರ್ನಾಟಕದ್ಯಂತ ಅಲ್ಲದೇ ಸಚಿವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕೂಡ ಬಂದ್ ಕರೆ ಕೊಟ್ಟು ಪ್ರತಿಭಟನೆ ಮಾಡಿರುತ್ತಾರೆ.
ಸಚಿವರ ಹೇಳಿಕೆ ವಿರುದ್ಧವಾಗಿ ಉದ್ದೇಶಪೂರ್ವಕವಾಗಿ ಪಥ ಸಂಚಲನ ಮಾಡುತ್ತಿದ್ದರಿಂದ ಭೀಮ್ ಆರ್ಮಿ ಸಂಘಟನೆಯ ಹಾಗೂ ಭಾರತೀಯ ದಲಿತ ಪ್ಯಾಂಥರ್ಸ ಸಂಘದ ಕಾರ್ಯಕರ್ತರು ಇದೇ ಮಾರ್ಗವಾಗಿ ಪಥ ಸಂಚಲನ ಮಾಡುವುದಾಗಿ ಅನುಮತಿ ನೀಡಬೇಕೆಂದು ಪತ್ರದ ಮೂಲಕ ಕೋರಿಕೊಂಡಿರುತ್ತಾರೆ.
ದಿನಾಂಕ 19-10-2025ರಂದು ಆರ್.ಎಸ್.ಎಸ್ ಹಾಗೂ ಭೀಮ್ ಆರ್ಮಿ ಸ೦ಘಟನೆ, ಭಾರತೀಯ ದಲಿತ ಪ್ಯಾಂಥರ್ಸ್ ಸಂಘದ ಕಾರ್ಯಕರ್ತರು ಪಥ ಸಂಚಲನ ಕೈಕೊಂಡರೆ ಸಂಘನೆಗಳ ಮಧ್ಯೆ ಯಾವುದಾರೂ ಗಂದಲ, ಗಲಾಟೆಗಳಾಗಿ ಕಾನೂನು ಸುವ್ಯವಸ್ಥೆ ಹಾಳಗುವ ಸಾಧ್ಯತೆ ಹೆಚ್ಚಾಗಿದ್ದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನುಮತಿ ನೀಡುವುದು ಸೂಕ್ತವಲ್ಲ ಎಂದು ಚಿತ್ತಾಪುರ ಪೋಲಿಸ್ ಠಾಣೆ ಅವರು ವರದಿ ಸಲ್ಲಿಸಿರುತ್ತಾರೆ. ಆದ್ದರಿಂದ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಲು ನಿರಾಕರಿಸಿ ಹಾಗೂ ಮನವಿ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


