ಬೆಂಗಳೂರು: ಮಾಸ್ಕ್‌ಮ್ಯಾನ್ ಚಿನ್ನಯ್ಯ ಧರ್ಮಸ್ಥಳದಲ್ಲಿ ತಾನು ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುವಾಗ ಅನೇಕ ಅಸಹಜ ಸಾವುಗಳು ಹಾಗೂ ಅತ್ಯಾಚಾರಗಳು ಸಂಭವಿಸಿದ್ದು, ಆ ಶವಗಳನ್ನು ತಾನೇ ಹೂತಿದ್ದಾಗಿ ಹೇಳಿಕೊಂಡು ದೂರು ನೀಡಿದ್ದ.
ಈ ದೂರಿನ ಆಧಾರದ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗ ರಾಜ್ಯ ಸರ್ಕಾರಕ್ಕೆ ಎಸ್‌ಐಟಿ ರಚನೆ ಮಾಡಬೇಕೆಂದು ಸೂಚಿಸಿದ ಪರಿಣಾಮ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಮಹತ್ವದ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಅದರ ಉಸ್ತುವಾರಿಯನ್ನು ಪ್ರಣಬ್ ಮೊಹಾಂತಿಯವರಿಗೆ ನೀಡಿತ್ತು.
ಜುಲೈ 20ರಂದು ಘೋಷಿಸಲ್ಪಟ್ಟ ಎಸ್‌ಐಟಿ ತಂಡ ಮೊದಲಿಗೆ ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಉತ್ಖನನ ಮಾಡಿ ಬಳಿಕ ವಿಠ್ಠಲ ಗೌಡ ಹೇಳಿದ ಸ್ಥಳಗಳಲ್ಲಿ ಐದಕ್ಕೂ ಹೆಚ್ಚು ಅಸ್ತಿಪಂಜರಗಳನ್ನು ಸಂಗ್ರಹಿಸಿತ್ತು. ಅಲ್ಲದೇ ಧರ್ಮಸ್ಥಳದ ಕುರಿತು ವಿಡಿಯೊ ಮಾಡಿದ್ದ ಯುಟ್ಯೂಬರ್‌ಗಳು, ಧರ್ಮಸ್ಥಳದಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದವರು, ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಹಲವರ ವಿಚಾರಣೆಯನ್ನು ನಡೆಸಿತ್ತು.
ಹೀಗೆ ಅನೇಕ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದ ಎಸ್‌ಐಟಿ ತಂಡ ಇದೀಗ ತನಿಖೆಯ ಕೊನೆಯ ಹಂತದಲ್ಲಿದ್ದು, ವರದಿ ಯಾವಾಗ ಸಲ್ಲಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ಕುರಿತು ಇಂದು ( ಅಕ್ಟೋಬರ್ 27 ) ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಎಸ್‌ಐಟಿಯವರು ಅಕ್ಟೋಬರ್ ತಿಂಗಳಿನಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದರು. ಹೀಗಾಗಿ ಇದೇ ತಿಂಗಳ 31ರೊಳಗೆ ವರದಿ ಸಲ್ಲಿಸಬಹುದು, ಒಂದೆರಡು ದಿನ ಹೆಚ್ಚು ಕಡಿಮೆಯಾಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ನವೆಂಬರ್ 3ರೊಳಗೆ ಧರ್ಮಸ್ಥಳ ಪ್ರಕರಣದ ವರದಿ ತಮ್ಮ ಕೈಸೇರಲಿದೆ ಎಂಬುದನ್ನು ಪರಮೇಶ್ವರ್ ಬಿಚ್ಚಿಟ್ಟಿದ್ದಾರೆ.
ಚಿನ್ನದ ದರದಲ್ಲಿ ಇಳಿಕೆ! 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1,140 ಕಡಿಮೆ! ಇಂದಿನ ಬೆಲೆ ಇಲ್ಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


