ಬೆಂಗಳೂರು ನಗರದಲ್ಲಿ ನವೆಂಬರ್ 19ರ ಮಧ್ಯಾಹ್ನ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದ ಒಂದೊಂದೆ ಅಂಶಗಳು ಈಗ ಬೆಳಕಿಗೆ ಬರುತ್ತಿವೆ. ಇದುವರೆಗೂ ಕೇಸ್ ಸಂಬಂಧ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಸಿದ್ದಾಪುರ ಠಾಣೆ ಪೊಲೀಸರು ಮೂರು ಕಡೆ ಮಹಜರು ಸಹ ನಡೆಸಿದ್ದಾರೆ. ಇದುವರೆಗೂ ಪೊಲೀಸರ ವಶಕ್ಕೆ ಸಿಕ್ಕಿರುವ ಹಣ 7.01 ಕೋಟಿ ರೂ.ಗಳು.
ಎಟಿಎಂಗೆ ಹಣ ಹಾಕುವ ವಾಹನವನ್ನು ದರೋಡೆ ಮಾಡಿ ಇನ್ನೋವಾ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ರವಿ, ರಾಕೇಶ್, ಜಿತೇಶ್ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್, ಸಿಎಂಎಸ್ ಸಂಸ್ಥೆ ಮಾಜಿ ಉದ್ಯೋಗಿ ಕ್ಸೇವಿಯರ್, ಹಾಲಿ ನೌಕರ ಗೋಪಿ ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ.
ಸಿಎಂಎಸ್ ಸಂಸ್ಥೆ ಉದ್ಯೋಗಿಗಳ ನೆರವು ಸಹ ದರೋಡೆ ಪ್ರಕರಣಕ್ಕೆ ಇತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೇ ದರೋಡೆ ಪ್ರಕರಣದ ಕುರಿತು ತಮಗೆ ಮಾಹಿತಿ ಒಂದೂವರೆ ಗಂಟೆ ತಡವಾಗಿ ಬಂದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದರು. ಅದಕ್ಕೆ ಕಾರಣ ಏನು? ಎಂಬುದು ಈಗ ಬಯಲಾಗಿದೆ.
ಊಟಕ್ಕೆ ಹೋಗಿದ್ದ ಉದ್ಯೋಗಿಗಳು: ದರೋಡೆ ನಡೆಯುವಾಗ ವ್ಯಾನ್‌ನಲ್ಲಿ ಕಸ್ಟೋಡಿಯನ್ ಅಫ್ತಾಬ್, ಗನ್‌ಮ್ಯಾನ್‌ಗಳಾದ ತಮ್ಮಯ್ಯ, ರಾಜಣ್ಣ ಇದ್ದರು. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಮೂವರನ್ನು ವಾಹನದಿಂದ ಇಳಿಸಿ ಹಣದ ಬಾಕ್ಸ್ ಜೊತೆ ಆರೋಪಿಗಳು ಪರಾರಿಯಾಗಿದ್ದರು.
ಆದರೆ ಈ ದರೋಡೆ ಪ್ರಕರಣದ ಕುರಿತು ಪೊಲೀಸರಿಗೆ ವಾಹನದಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದ್ದು ಸುಮಾರು ಒಂದೂವರೆ ತಾಸು ತಡವಾಗಿ. ದರೋಡೆ ಆಗುತ್ತಿದ್ದಂತೆಯೇ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡುವ ಬದಲು ಊಟಕ್ಕೆ ಹೋಗಿದ್ದರು.
ಗನ್ ಮ್ಯಾನ್‌ಗಳಾದ ತಮ್ಮಯ್ಯ, ರಾಜಣ್ಣ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದೆ. ಆದ್ದರಿಂದ ಸಿಎಂಎಸ್ ಸಂಸ್ಥೆ ಸಿಬ್ಭಂದಿಯ ನಿರ್ಲಕ್ಷ್ಯ ಘಟನೆಯಲ್ಲಿ ಎದ್ದು ಕಾಣುತ್ತಿದೆ. ದರೋಡೆ ನಡೆದ ಸ್ಥಳಕ್ಕೆ ಹತ್ತಿರದಲ್ಲಿಯೇ ಸಿದ್ದಾಪುರ ಪೊಲೀಸ್ ಠಾಣೆ ಇದೆ.
ಆದರೆ ಸಿಬ್ಬಂದಿ ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡುವ ಬದಲು ಊಟಕ್ಕೆ ಹೋಗಿದ್ದರು. ಅಶೋಕ ಪಿಲ್ಲರ್‌ನಿಂದ ಸ್ವಲ್ಪ ದೂರ ಬಂದಾಗ ಸಿಬ್ಬಂದಿಗಳು ಸಿಎಂಎಸ್ ಸಂಸ್ಥೆ ಮ್ಯಾನೇಜರ್‌ಗೆ ಕರೆ ಮಾಡಿ ಆರ್‌ಬಿಐ ಸಿಬ್ಬಂದಿ ತಮ್ಮನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಇದಾದ ಬಳಿಕ ಅವರು ಹಣ ದರೋಡೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದು ಸುಮಾರು 2 ಗಂಟೆಗಳ ಬಳಿಕ. ಆದ್ದರಿಂದ ಈ ಪ್ರಕರಣದಲ್ಲಿ ಉದ್ಯೋಗಿಗಳ ಕೈವಾಡ ಇರುವುದ ಕುರಿತು ಪೊಲೀಸರಿಗೆ ಅನುಮಾನವಿತ್ತು. ಈಗ ಆ ಅನುಮಾನ ನಿಜವಾಗಿದೆ.
ಹಣ ಸಾಗಣೆ ಮಾಡುತ್ತಿದ್ದ ವಾಹನದ ಎಲ್ಲಾ ಸಿಬ್ಬಂದಿಯನ್ನು ಸಿದ್ದಾಪುರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆಗ ಸಿಎಂಎಸ್ ಸಂಸ್ಥೆಯ ಹಾಲಿ, ಮಾಜಿ ಉದ್ಯೋಗಿಯ ಕೈವಾಡದ ಕುರಿತು ಮಾಹಿತಿ ಸಿಕ್ಕಿತ್ತು. ವಾಹನ ಯಾವ ಮಾರ್ಗದಲ್ಲಿ ಹೋಗುತ್ತದೆ? ಎಂಬುದು ಉದ್ಯೋಗಿಗಳಿಗೆ ಖಚಿತವಾಗಿ ತಿಳಿದಿರುತ್ತದೆ. ಅವರೇ ದರೋಡೆ ಮಾಡುವವರಿಗೆ ಈ ಮಾಹಿತಿ ನೀಡಿ ಸಹಕಾರ ಕೊಟ್ಟಿದ್ದಾರೆ.
ಹೈದರಾಬಾದ್‌ನಲ್ಲಿ ಅಡಗಿದ್ದ ಈ ಪ್ರಕರಣದ ಆರೋಪಿಗಳಾದ ರವಿ, ನೆಲ್ಸನ್ ಮತ್ತು ನವೀನ್‌ನನ್ನು ನಾಪಳ್ಳಿ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದರು. 57 ಲಕ್ಷ ರೂ. ಹಣ ಇವರ ಬಳಿ ಇತ್ತು. 7.11 ಕೋಟಿ ರೂ. ಪೈಕಿ ಇದುವರೆಗೂ 7.01 ಕೋಟಿ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ಇನ್ನೂ ಮುಂದುವರೆದಿದ್ದು, ಎಷ್ಟು ಆರೋಪಿಗಳು ಶಾಮೀಲಾಗಿದ್ದಾರೆ? ಎಂಬುದು ಇನ್ನೂ ತಿಳಿದುಬರಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


