ಕೊಪ್ಪಳ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಬೆಳಗಿನ ಜಾವ 6 ಗಂಟೆಗೆ ಹೊಟ್ಟೆ ನೋವು ಎಂದು ಶೌಚಾಲಯಕ್ಕೆ ತೆರಳಿದ್ದ ವೇಳೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ತಾಯಿ ಹಾಗೂ ಮಗುವಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ.
ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಕಳೆದ ಎರಡು ತಿಂಗಳ ಹಿಂದೆ ಹಾಸ್ಟೆಲ್‌ನಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಸಂದರ್ಭದಲ್ಲೂ ಸಹ ಬಾಲಕಿ ಎಂಬ ವಿಚಾರ ಬೆಳಕಿಗೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ.
ಇನ್ನು ಬಾಲಕಿಯ ಸ್ವಗ್ರಾಮದ 23 ವರ್ಷದ ಯುವಕ ಆಕೆಯ ಜತೆ ಪ್ರೀತಿಯ ನಾಟಕವನ್ನಾಡಿ ಅತ್ಯಾಚಾರ ಎಸಗಿದ್ದು, ಆತನ ವಿರುದ್ಧ ಇದೀಗ ಪೋಕ್ಸೊ ಪ್ರಕರಣ ದಾಖಲಾಗಿದೆ.
ಬಾಲಕಿ ವಸತಿ ನಿಲಯಕ್ಕೆ ಆಗಮಿಸಿದ ಬಳಿಕವೂ ವಾರ್ಡನ್ ಹಾಗೂ ಶಾಲಾ ಶಿಕ್ಷಕರು ನಿರ್ಲಕ್ಷ್ಯ ವಹಿಸಿದ್ದು, ಆರೋಪಿ ಸೇರಿ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ, ವೈದ್ಯರಾದ ಭರತೇಶ ಹಿರೇಮಠ ಹಾಗೂ ಸಾಬಿಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


