ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ರಾಜ್ಯದ ಮಾಜಿ ಸಿಎಂ ದಿ. ಜಯಲಲಿತಾ ಆಪ್ತರಾಗಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕ ಕೆ.ಎ.ಸೆಂಗೊಟ್ಟೆಯನ್ ಬೆಂಬಲಿಗರ ಜೊತೆ ನಟ ವಿಜಯ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸೇರ್ಪಡೆಯಿಂದ ವಿಜಯ್ ಪಕ್ಷದ ಬಲ ಮತ್ತಷ್ಟು ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತದೆ.
ಕೆ.ಎ.ಸೆಂಗೊಟ್ಟೆಯನ್ ಬೆಂಬಲಿಗರ ಜೊತೆ ನಟ ವಿಜಯ್ ಸ್ಥಾಪನೆ ಮಾಡಿರುವ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಚೇರಿಗೆ ಗುರುವಾರ ಭೇಟಿ ನೀಡಿದ್ದರು. ಅವರು ಟಿವಿಕೆ ಪಕ್ಷವನ್ನು ಸೇರಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಎಐಎಡಿಎಂಕೆ ಹಿರಿಯ ನಾಯಕ ಟಿವಿಕೆ ಪಕ್ಷವನ್ನು ಸೇರಿದ್ದು, ಪಕ್ಷಕ್ಕೆ ರಾಜ್ಯದಲ್ಲಿ ಭಾರೀ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಕೆ.ಎ.ಸೆಂಗೊಟ್ಟೆಯನ್: 1972ರಲ್ಲಿ ದಿ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಸ್ಥಾಪನೆಯಾದ ಸಮಯದಿಂದಲೂ ಕೆ.ಎ.ಸೆಂಗೊಟ್ಟೆಯನ್ ಪಕ್ಷದ ಜೊತೆ ಇದ್ದರು. ಪಕ್ಷದ ಏಳು ಬೀಳು, ಅಧಿಕಾರ, ಚುನಾವಣೆ ಸೋಲು ಎಲ್ಲವನ್ನು ಅವರು ಹತ್ತಿರದಿಂದ ಬಲ್ಲರು.
ಈ ವರ್ಷದ ಫೆಬ್ರವರಿಯಲ್ಲಿ ಕೆ.ಎ.ಸೆಂಗೊಟ್ಟೆಯನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಬಂಡಾಯ ಎದ್ದಾಗಲೇ ತಮಿಳುನಾಡು ಒಮ್ಮೆ ತಿರುಗಿ ನೋಡಿತ್ತು. ಈಗ ಕೆ.ಎ.ಸೆಂಗೊಟ್ಟೆಯನ್ ಟಿವಿಕೆ ಪಕ್ಷವನ್ನು ಸೇರಿದ್ದು, ಜನರ ಅಚ್ಚರಿಗೆ ಕಾರಣವಾಗಿದೆ.
77 ವರ್ಷದ ಮಿತಭಾಷಿ ನಾಯಕ ಕೆ.ಎ.ಸೆಂಗೊಟ್ಟೆಯನ್ ಎಐಎಡಿಎಂಕೆ ಪಕ್ಷ ಮತ್ತು ಅದರ ನಾಯಕತ್ವಕ್ಕೆ ನಿಷ್ಠರಾಗಿದ್ದರು. ಅವರ ಪಕ್ಷ ನಿಷ್ಠೆಯನ್ನು ಯಾರೂ ಸಹ ಪ್ರಶ್ನೆ ಮಾಡುವ ರೀತಿಯಲ್ಲಿಯೂ ಇರಲಿಲ್ಲ. ಆದರೆ ರಾಜಕೀಯ ವಲಯದಲ್ಲಿ ಬೇರೆ ಸುದ್ದಿಗಳು ಹಬ್ಬಿದ್ದವು. ಎಐಎಡಿಎಂಕೆ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದಾಗ ಪಕ್ಷದಿಂದ ವಿ.ಕೆ.ಶಶಿಕಲಾ, ಟಿ.ಟಿ.ವಿ.ದಿನಕರನ್ ಹಾಗೂ ಒ ಪನೀರ್ ಸೆಲ್ವಂ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.
ಆದರೆ ಇವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲು ಬಿಜೆಪಿ ಕೆ.ಎ.ಸೆಂಗೊಟ್ಟೆಯನ್ ಮೂಲಕ ಎಡಪ್ಪಾಡಿ ಪಳನಿಸ್ವಾಮಿ ಮೇಲೆ ಒತ್ತಡ ಹಾಕಿತ್ತು ಎಂಬುದು ಸುದ್ದಿ. ಪಕ್ಷದ ನಾಯಕತ್ವದ ವಿರುದ್ಧವೇ ಈ ವರ್ಷ ಬಂಡಾಯ ಎದ್ದಿದ್ದ ಕೆ.ಎ.ಸೆಂಗೊಟ್ಟೆಯನ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಬಿಜೆಪಿ ಸಹ ಕೆ.ಎ.ಸೆಂಗೊಟ್ಟೆಯನ್ ಬೆಂಬಲಕ್ಕೆ ಬಾರದ ಕಾರಣ ಅವರು ಅಂತಿಮವಾಗಿ ಬೆಂಬಲಿಗರ ಜೊತೆ ಟಿವಿಕೆ ಪಕ್ಷವನ್ನು ಸೇರಿದ್ದಾರೆ.
ಪ್ರಭಾವಿ ಗೌಡರ್ ಸಮಯದಾಯಕ್ಕೆ ಸೇರಿದ ಕೆ.ಎ.ಸೆಂಗೊಟ್ಟೆಯನ್ ದಿ.ಜಯಲಲಿತಾಗೂ ಆಪ್ತರಾಗಿದ್ದರು. ಉತ್ತಮ ಸಂಘಟನಾತ್ಮಕ ಕೌಶಲ್ಯ ಹೊಂದಿರುವ ಅವರು ಜಯಲಲಿತಾ ಚುನಾವಣಾ ಪ್ರಚಾರದ ರೂಪುರೇಷೆ ತಯಾರು ಮಾಡುತ್ತಿದ್ದರು. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ತೀರ್ಪು ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಇವರ ಹೆಸರು ಸಹ ಕೇಳಿ ಬಂದಿತ್ತು.
ಪಕ್ಷದ ಹಿರಿಯ ನಾಯಕ ಕೆ.ಪಳನಿಸ್ವಾಮಿಗೆ ದಾರಿ ಮಾಡಿಕೊಟ್ಟು ಕೆ.ಎ.ಸೆಂಗೊಟ್ಟೆಯನ್ ಹಿಂದೆ ಸರಿದಿದ್ದರು. ಈಗ ಕೆ.ಎ.ಸೆಂಗೊಟ್ಟೆಯನ್ ಟಿವಿಕೆ ಪಕ್ಷವನ್ನು ಸೇರಿದ್ದು, ಪಕ್ಷಕ್ಕೆ ಭಾರೀ ಲಾಭವಾಗಲಿದೆ. ಗೌಡರ್ ಸಮುದಾಯದ ಮತಗಳು ಪಕ್ಷಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


