ಬೆಂಗಳೂರು: ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿ, ನಂತರ ಏನೂ ಗೊತ್ತಿಲ್ಲದಂತೆ ಗಂಡ ನಾಪತ್ತೆ ಎಂದು ದೂರು ನೀಡಿದ್ದ ಮಹಿಳೆಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಮೂಲದವರಾದ ಸುರೇಶ್ ಮತ್ತು ಅವರ ಪತ್ನಿ ಶರಣಮ್ಮ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವೇಳೆ ಕೆಲಸದ ಸ್ಥಳದಲ್ಲಿ ಶರಣಮ್ಮ ಅವರಿಗೆ ವೀರಭದ್ರ ಎಂಬ ಯುವಕನ ಪರಿಚಯವಾಗಿ, ಇಬ್ಬರ ನಡುವೆ ಸುಮಾರು ಆರೇಳು ತಿಂಗಳಿಂದ ಪ್ರೀತಿ ಬೆಳೆದಿತ್ತು. ಒಮ್ಮೆ ಪತಿ ಸುರೇಶ್ ಈ ವಿಚಾರವನ್ನು ಕಂಡುಹಿಡಿದು ಪತ್ನಿಗೆ ಬುದ್ಧಿ ಹೇಳಿ ಸುಮ್ಮನಾಗಿದ್ದರು. ಆದರೆ, ವಿಷಯ ಬಹಿರಂಗವಾದ ಕಾರಣ ಶರಣಮ್ಮ ಮತ್ತು ಪ್ರಿಯಕರ ವೀರಭದ್ರ ಸೇರಿ ಸುರೇಶ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದರು.
ಅದರಂತೆ, ನವೆಂಬರ್ 19 ರಂದು, ಕಂಠಪೂರ್ತಿ ಕುಡಿದು ಮಲಗಿದ್ದ ಸುರೇಶ್‌ನ ತಲೆಗೆ ಕಲ್ಲಿನಿಂದ ಹೊಡೆದು, ನಂತರ ನೇಣು ಬಿಗಿದು ಕೊಲೆ ಮಾಡಿದರು. ಬಳಿಕ ವೀರಭದ್ರ ತನ್ನ ಗೆಳೆಯ ಅನಿಲ್ ಎಂಬಾತನಿಗೆ ಕರೆ ಮಾಡಿ, ಆತನ ಕಾರಿನಲ್ಲಿ ಶವವನ್ನು ನಿರ್ಜನ ಪ್ರದೇಶಕ್ಕೆ ಸಾಗಿಸಿ, ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ.
ಕೊಲೆಯಾದ ಮೂರು ದಿನಗಳ ನಂತರ ಶರಣಮ್ಮ ಏನೂ ಗೊತ್ತಿಲ್ಲದಂತೆ ಪತಿ ಕಾಣೆಯಾಗಿದ್ದಾರೆ ಎಂದು ಬ್ಯಾಡರಹಳ್ಳಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಳು. ಪೊಲೀಸರು ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಒಂದು ಕಾರಿನ ಓಡಾಟದ ಬಗ್ಗೆ ಅನುಮಾನಗೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಶರಣಮ್ಮ, ವೀರಭದ್ರ ಮತ್ತು ಅನಿಲ್ ಸೇರಿದಂತೆ ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಿಪರೀತ ಹಲ್ಲು ನೋವಿಗೆ ಮನೆಯಲ್ಲೇ ಇದೆ ‘ದಿವ್ಯೌಷಧಿ’! ನೋವು ನಿವಾರಣೆಗೆ 6 ತಕ್ಷಣದ ಪರಿಹಾರಗಳು ಇಲ್ಲಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


