ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲದ ಕುರಿತು ಶುಕ್ರವಾರ ಬಿಗ್ ಅಪ್‌ಡೇಟ್ ಸಿಕ್ಕಿದೆ. ದೆಹಲಿಯ ಹೈಕಮಾಂಡ್ ನಾಯಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಒಂದು ಸಾಲಿನ ಸಂದೇಶ ನೀಡಲು ತಯಾರಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ದೆಹಲಿಗೆ ತೆರಳಿದ್ದಾರೆ. ಮುಂದಿನ ವಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದೆಹಲಿಗೆ ಕರೆಸಿ ವಾಸ್ತವ ಸ್ಥಿತಿಯನ್ನು ಮುಂದಿಟ್ಟು ನಾಯಕರು ಮನವೊಲಿಕೆ ಮಾಡಲಿದ್ದಾರೆ.
ಕಾಂಗ್ರೆಸ್ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ‘ಸಿದ್ದರಾಮಯ್ಯ ನಾಯಕತ್ವಕ್ಕೆ ಸದ್ಯ ಅಪಾಯವಿಲ್ಲ. ಡಿ.ಕೆ.ಶಿವಕುಮಾರ್ ಕಾಯುವುದು ಅನಿವಾರ್ಯ’ ಎಂಬುದು ಒಂದು ಸಾಲಿನ ತೀರ್ಮಾನವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇದನ್ನು ಸ್ವತಃ ರಾಹುಲ್ ಗಾಂಧಿ ಅವರೇ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಲಿದ್ದಾರೆ.
ಹೈಕಮಾಂಡ್ ನಾಯಕರ ಈ ತೀರ್ಮಾನಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಪಕ್ಷ, ಸರ್ಕಾರವನ್ನು ಮುನ್ನಡೆಸಬೇಕು. ಮುಂದಿನ ಚುನಾವಣೆಗಳನ್ನು ಎದುರಿಸಲು ರಾಷ್ಟ್ರ, ರಾಜ್ಯಮಟ್ಟದಲ್ಲಿ ಪಕ್ಷದ ಉಳಿವಿಗಾಗಿ ಹೈಕಮಾಂಡ್ ಈ ತೀರ್ಮಾನವನ್ನು ಮಾಡಿದೆ. ಅಲ್ಲದೇ ಸಿದ್ದರಾಮಯ್ಯ ಬೇಡಿಕೆಯಾದ ಸಂಪುಟ ಪುನಾರಚನೆಗೂ ಹೈಕಮಾಂಡ್ ಒಪ್ಪಿಗೆ ನೀಡಲಿದೆ.
ಕಾರಣ-1, ಸಂಖ್ಯಾಬಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಬಲವಾದ ನಾಯಕ. ವಿವಿಧ ಸಮಯದಾಯದ ಭಾರೀ ಬೆಂಬಲವನ್ನು ಅವರು ಹೊಂದಿದ್ದಾರೆ. ಅವರ ಬಳಿ ಶಾಸಕರ ಸಂಖ್ಯಾಬಲವಿದೆ. 137 ಶಾಸಕರ ಪೈಕಿ 100ಕ್ಕೂ ಅಧಿಕ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದ್ದಾರೆ. ಆದ್ದರಿಂದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿದೆ.
ಕಾರಣ-2: ಸಂಪುಟ ಪುನರ್ ರಚನೆಗೆ ಆದ್ಯತೆ: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ದೆಹಲಿಗೆ ಭೇಟಿ ನೀಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಒತ್ತಡವನ್ನು ಹಾಕಿತ್ತಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆ ಬೇಡಿಕೆಗೆ ಮನ್ನಣೆ ನೀಡಲಿದೆ. ಸಂಪುಟ ಪುನಾರಚನೆ ಮಾಡಿದಾಗ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೂ ಸಚಿವ ಸ್ಥಾನವನ್ನು ನೀಡಲಾಗುತ್ತದೆ. ಸದ್ಯಕ್ಕೆ ಗೊಂದಲ ಬೇಡ ಎಂಬುದು ಹೈಕಮಾಂಡ್ ಜಾಣ ನಡೆಯಾಗಿದೆ.
ಕಾರಣ-3: ಸಮುದಾಯದ ಬೆಂಬಲ: ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರು. ಆದರೆ ಮೈಸೂರು, ಹಾಸನ ಭಾಗದ ಒಕ್ಕಲಿಗರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ. 2023ರ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಬೆಂಬಲವನ್ನು ಜೆಡಿಎಸ್‌ನಿಂದ ಕಾಂಗ್ರೆಸ್ ಕಡೆಗೆ ತಂದರು. ಆದರೆ ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಪ್ರಭಾವವಿದೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಕಾಯುವುದು ಅನಿವಾರ್ಯವಾಗಿದೆ.
ಕಾರಣ-4: ವಿಧಾನಸಭೆ ಅಧಿವೇಶನ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯ ವೇಳೆ ಮಲ್ಲಿಕಾರ್ಜುನ ಖರ್ಗೆ ಈ ಗೊಂದಲ ಬೇಗ ಬಗೆಹರಿಸಿ. ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಗೊಂದಲ ಹೀಗೆ ಮುಂದುವರೆದರೆ ಪ್ರತಿಪಕ್ಷಗಳ ಕೈಗೆ ಆಯುಧ ನೀಡಿದಂತೆ ಆಗುತ್ತದೆ. ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದನ್ನು ಕಳೆದುಕೊಳ್ಳುವ ಸ್ಥಿತಿಯೂ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರಣ-5: ಅವಿಶ್ವಾಸ ನಿರ್ಣಯ: ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲವನ್ನು ಬಳಕೆ ಮಾಡಿಕೊಂಡು ಅಧಿವೇಶನದಲ್ಲಿ ಪ್ರತಿಪಕ್ಷಗಳಾಗಿರುವ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಿದರೆ ಪಕ್ಷ, ಸರ್ಕಾರದ ವರ್ಚಸ್ಸು ರಾಷ್ಟ್ರಮಟ್ಟದಲ್ಲಿ ಹಾಳಾಗುತ್ತದೆ. ಆದ್ದರಿಂದ ಗೊಂದಲ ಬಗೆಹರಿಸುವ ಕುರಿತು ಖಡಕ್ ಎಚ್ಚರಿಕೆ ನೀಡಬೇಕು ಎಂದು ಖರ್ಗೆ ರಾಹುಲ್ ಗಾಂಧಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಧಿಕಾರ ಹಂಚಿಕೆ ಗೊಂದಲದ ನಡುವೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಶುಕ್ರವಾರ ಕಾರ್ಯಕ್ರಮವೊಂದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಭಯ ನಾಯಕರು ಒಟ್ಟಾಗಿ ಕಾಣಿಸಿಕೊಂಡರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


