ಚಂಡೀಗಢ್: ಮುಲ್ಲಾನ್‌ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಮೇ 29 ) ಸಂಜೆ 7.30ಕ್ಕೆ 18ನೇ ಐಪಿಎಲ್‌ನ ಒಂದನೇ ಕ್ವಾಲಿಫಯರ್ ಪಂದ್ಯ ಆರಂಭವಾಗಲಿದ್ದು, ಲೀಗ್ ಹಂತದಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ನೇರವಾಗಿ ಫೈನಲ್ ತಲುಪಲಿದ್ದು, ಸೋಲುವ ತಂಡ ಎರಡನೇ ಕ್ವಾಲಿಫಯರ್ ಪಂದ್ಯ ತಲುಪಲಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲಲಿರುವ ತಂಡದ ಜೊತೆ ಫೈನಲ್ ಪ್ರವೇಶಕ್ಕಾಗಿ ಮತ್ತೊಮ್ಮೆ ಸೆಣಸಾಡಲಿದೆ.
ಹೀಗಾಗಿ ಈ ಪಂದ್ಯ ಮಹತ್ವದ್ದಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲು ಪ್ರಮುಖ ಆಟಗಾರರು ಲಭ್ಯರಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಟಿಮ್ ಡೇವಿಡ್ ಹಾಗೂ ಜೋಶ್ ಹೇಜಲ್‌ವುಡ್ ಕಳೆದ ಪಂದ್ಯದಲ್ಲಿ ಕಣಕ್ಕಿಳಿಯದೇ ಇದ್ದರು. ಈ ಇಬ್ಬರೂ ಇಂದಿನ ಪಂದ್ಯದಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.
ಅದರಲ್ಲೂ ಟಿಮ್ ಡೇವಿಡ್ ಲಭ್ಯತೆ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಗಾಯಕ್ಕೊಳಗಾಗಿದ್ದ ಟಿಮ್ ಡೇವಿಡ್ ಲಕ್ನೋ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯಕ್ಕೂ ಅಲಭ್ಯರಾಗಿದ್ದರು. ಆ ಪಂದ್ಯದಲ್ಲಿ ಟಿಮ್ ಡೇವಿಡ್ ಬದಲಾಗಿ ಟೂರ್ನಿಯಲ್ಲಿ ಫಾರ್ಮ್‌ನಲ್ಲಿ ಇಲ್ಲದ ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು ಕಣಕ್ಕಿಳಿಸಿತ್ತು.
ಆದರೆ ಲಿವಿಂಗ್‌ಸ್ಟನ್ ಆ ಪಂದ್ಯದಲ್ಲಿಯೂ ವಿಫಲರಾದರು. ಬೌಲಿಂಗ್ ಮಾಡದ ಲಿವಿಂಗ್‌ಸ್ಟನ್ ಬ್ಯಾಟಿಂಗ್‌ನಲ್ಲಿ ಗೋಲ್ಡನ್ ಡಕ್‌ಔಟ್ ಆಗಿ ಮಕಾಡೆ ಮಲಗಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಟಿಮ್ ಡೇವಿಡ್ ಅಲಭ್ಯರಾದರೂ ಲಿವಿಂಗ್‌ಸ್ಟನ್ ಬಿಟ್ಟು ಬೇರೆ ಆಟಗಾರನನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಬೇಕು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


