ನವದೆಹಲಿ: ಮುಂಗಾರು ಮಳೆ ದೇಶದ ಹಲವೆಡೆ ಅಬ್ಬರಿಸುತ್ತಿದೆ. ಈ ಸಂತಸದ ನಡುವೆಯೇ ಭಾರತ ಹವಾಮಾನ ಇಲಾಖೆ ಮಹತ್ವದ ಸಂಗತಿಯನ್ನು ತಿಳಿಸಿದೆ.
ಮಾನ್ಸೂನ್ ಆರಂಭವಾದಾಗಿನಿಂದ ದೇಶದಲ್ಲಿ ಸಾಮಾನ್ಯಕ್ಕಿಂತ ಶೇ.7ರಷ್ಟು ಹೆಚ್ಚಿನ ಮಳೆಯಾಗಿದೆ. ರಾಜಸ್ಥಾನ, ಲಡಾಖ್, ನಾಗಾಲ್ಯಾಂಡ್, ಮಣಿಪುರ ಮತ್ತು ಸಿಕ್ಕಿಂನಲ್ಲಿ ಅತೀಹೆಚ್ಚು ಮಳೆಯಾಗಿದೆ.
ಕೆಲವು ರಾಜ್ಯಗಳು ಹೆಚ್ಚಿನ ಮಳೆ ಪಡೆದಿದ್ದರೆ, ಇನ್ನು ಕೆಲವು ರಾಜ್ಯಗಳು ಸಾಮಾನ್ಯಕ್ಕಿಂತ ಕಡಿಮೆ ಕಂಡಿವೆ. ಈವರೆಗೂ ದೇಶದಲ್ಲಿ 447.8 ಮಿಮೀ ಮಳೆಯಾಗಿದೆ ಎಂದು ಐಎಂಡಿ ಹೇಳಿದೆ.
ದೇಶಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆದರೂ, ಕೆಲವೆಡೆ ಮಳೆ ಕೊರತೆ ಉಂಟಾಗಿದೆ. ದೇಶದಲ್ಲಿ ಸಾಮಾನ್ಯವಾಗಿ ಇಷ್ಟೊತ್ತಿಗಾಗಲೇ 418.9 ಮಿ ಮೀ. ಮಳೆ ಸುರಿಯುತ್ತದೆ. ಆದರೆ, ಈ ಬಾರಿ ಅದು ಹೆಚ್ಚಾಗಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಗೋವಾ, ತ್ರಿಪುರ, ಮಿಜೋರಾಂ, ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‍ಗಢ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಐಎಂಡಿ ದತ್ತಾಂಶದ ಪ್ರಕಾರ, ಈ ಪ್ರದೇಶಗಳಲ್ಲಿ ಸರಾಸರಿ ಮಳೆಯೇ ಶೇಕಡಾ.19ಕ್ಕಿಂತ ಕಡಿಮೆ ಇದೆ.
ರಾಜಸ್ಥಾನದಲ್ಲಿ 220.4 ಮಿಮೀ ಮಳೆಯಾಗಬೇಕಾಗಿತ್ತು. ಆದರೆ ಈ ಬಾರಿ, ಶೇ.92 ರಷ್ಟು ಅಧಿಕ ಅಂದರೆ, 384.7 ಮಿ ಮೀ. ವರುಣ ಸುರಿದಿದೆ. ಲಡಾಖ್‌ನಲ್ಲಿ ಸಾಮಾನ್ಯವಾಗಿ ಮಳೆ ಪ್ರಮಾಣ ಕಡಿಮೆ. ಅಲ್ಲಿ 10.7 ಮಿಮೀ ಮಳೆಯಾಗುತ್ತದೆ. ಆದರೆ, ಈ ಬಾರಿ 30 ಮಿಮೀ ಮಳೆ ಸುರಿದಿದೆ. ಅಂದರೆ, ಶೇ.181 ರಷ್ಟು ಹೆಚ್ಚಾಗಿದೆ.
ನಾಗಾಲ್ಯಾಂಡ್ 514.5 ಮಿಮೀ ಮತ್ತು ಮಣಿಪುರದಲ್ಲಿ 557.9 ಮಿಮೀ ಮಳೆ ದಾಖಲಾಗಿದೆ. ಸಿಕ್ಕಿಂನಲ್ಲಿ 598.4 ಮಿಮೀ ಮಳೆ ಸುರಿದಿದೆ. ಇದು ಸಾಮಾನ್ಯಕ್ಕಿಂತ ಶೇ.78 ರಷ್ಟು ಅಧಿಕವಾಗಿದೆ. ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುನಲ್ಲಿ ಹೆಚ್ಚುವರಿ ಮಳೆ (ಶೇ. 20-59) ದಾಖಲಾಗಿದೆ.
ಮಧ್ಯಪ್ರದೇಶದಲ್ಲಿ 418.4 ಮಿಮೀ ಬದಲಿಗೆ 645.8 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ ಶೇ. 54 ರಷ್ಟು ಹೆಚ್ಚು.ಗುಜರಾತ್‍ನಲ್ಲಿ 463.2 ಮಿಮೀ (ಶೇ. 35 ರಷ್ಟು ಹೆಚ್ಚು) ಮಳೆಯಾಗಿದೆ.ದಾದ್ರಾ- ನಗರ ಹವೇಲಿ ಮತ್ತು ದಮನ್ – ಡಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ 1153.8 ಮಿಮೀ ಬದಲಿಗೆ 1466.1 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ ಶೇ. 27 ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.
ಆಪರೇಷನ್ ಮಹಾದೇವ್ ಮೂಲಕ ಪಹಲ್ಗಾಮ್ ದಾಳಿಯ ಮೂವರು ಉಗ್ರರ ಹತ್ಯೆ; ಅಮಿತ್ ಶಾ ಸ್ಪಷ್ಟನೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


