ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ದತೆಗಳು ಒಂದೆಡೆ ಭರದಿಂದ ಸಾಗಿದ್ದರೆ ಮತ್ತೊಂದೆಡೆ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಲಾಗಿದೆ. ಇದು ಬಹುಸಂಖ್ಯಾತರ ಅಸಮಾಧಾನಕ್ಕೆ ಎಡೆಮಾಡಿ ಕೊಟ್ಟಿರುವುದಲ್ಲದೆ ಕೆಲವರ ವಿರೋಧಕ್ಕೂ ಆಸ್ಪದ ನೀಡಿದೆ.
ಮುಖ್ಯಮಂತ್ರಿಯವರು ದಸರಾ ಉದ್ಘಾಟನಾಕಾರರ ಹೆಸರು ಪ್ರಕಟಿಸಿದ ಬೆನ್ನಲ್ಲೇ ಅಸಮಾಧಾನದ ಹೊಗೆಯಾಡತೊಡಗಿದ್ದು, ಇನ್ನೂ ನಿಂತಿಲ್ಲ. ಹಿಂದೂ ಧರ್ಮದ ಪಂಚಾಂಗದ ಪ್ರಕಾರ ದಸರಾ ಉದ್ಘಾಟನೆಗೆ ಮುಹೂರ್ತ, ಸಮಯ, ಘಳಿಗೆ ನಿಗದಿ ಮಾಡಲಾಗುತ್ತದೆ.
ಹಿಂದೂ ಪಂಚಾಂಗದಂತೆ ಮುಹೂರ್ತ:ಈ ಬಾರಿ ಸೆ.22ರಿಂದ ದಸರಾ ಉತ್ಸವ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ಅಂದು ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದಸರಾ ಆಚರಣೆಗಾಗಿ ತರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಉದ್ಘಾಟನಾಕಾರರು ಪುಷ್ಪಾರ್ಚನೆ ಮಾಡುವುದು ಇದುವರೆಗೂ ನಡೆದು ಬಂದಿರುವ ಸಾಂಪ್ರದಾಯಿಕ ರೂಢಿ.
ರಾಜಮನೆತನದಿಂದ ನಡೆಯುತ್ತಿದ್ದ ದಸರಾ ಉತ್ಸವವು ರಾಜ್ಯ ಸರ್ಕಾರದ ವತಿಯಿಂದ ನಡೆಯಲು ಆರಂಭವಾದ ಮೇಲೆ ಜನತಾ ದಸರಾವಾಗಿ ಮಾರ್ಪಟ್ಟಿತು. ವರ್ಷದಿಂದ ವರ್ಷಕ್ಕೆ ದಸರಾ ವೈಭೋಗವೂ ಹೆಚ್ಚುತ್ತಾ ಬಂದಿದೆ. ಧಾರ್ಮಿಕ ಆಚರಣೆಗಳ ಜೊತೆ ಜೊತೆಯಲ್ಲೇ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ವಸ್ತುಪ್ರದರ್ಶನಗಳು ನಡೆದು ದಸರಾದ ಉತ್ಸವವನ್ನು ಇಮಡಿಗೊಳಿಸುತ್ತವೆ.
ಈ ಬಾರಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಬೇಕಿದೆ. ಅವರು ತಮ ಸ್ವಧರ್ಮದ ನಂಬಿಕೆಗೆ ವಿರುದ್ಧವಾಗಿ ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆಯೇ ಎಂಬುದು ಬಹು ಚರ್ಚೆಗೆ ಗ್ರಾಸವಾಗಿರುವ ವಿಚಾರವಾಗಿದೆ. ಏಕೆಂದರೆ, ಅವರು ಕನ್ನಡಾಂಬೆ ಭುವನೇಶ್ವರಿ ಪ್ರತಿಮೆ ವಿಚಾರದಲ್ಲಿ ಈ ಹಿಂದೆ ಮಾತನಾಡಿರುವ ವಿಚಾರಕ್ಕೆ ಹಲವರ ವಿರೋಧ ವ್ಯಕ್ತವಾಗಿದೆ.
ಸಾಹಿತಿಗಳ ಬಗ್ಗೆ ಗೌರವ: ಸಾಹಿತಿಯಾದವರನ್ನು ಈ ನಾಡು ಬಹಳ ಗೌರವದಿಂದ ಸನಾಸಿ, ಸತ್ಕರಿಸುತ್ತಾ ಬಂದಿದೆ. ಅವರನ್ನು ಸಾಹಿತ್ಯ ಸಮೇಳನದ ಅಧ್ಯಕ್ಷ ಸ್ಥಾನದಂತಹ ಗೌರವಕ್ಕೆ ಆಯ್ಕೆ ಮಾಡಿದ್ದರೆ ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ ಧಾರ್ಮಿಕ ಶ್ರದ್ದೆಯ ವಿಚಾರವಾಗಿರುವ ದಸರಾ ಮಹೋತ್ಸವ ಉದ್ಘಾಟನೆಗೆ ಇವರನ್ನು ಆಹ್ವಾನಿಸುತ್ತಿರುವುದು ಬಹುಸಂಖ್ಯಾತರ ಅಸಹನೆಗೆ ಕಾರಣವಾಗಿದೆ. ಹೀಗಾಗಿ ಒಂದೆಡೆ ತೀವ್ರ ವಿರೋಧವು ವ್ಯಕ್ತವಾಗುತ್ತಿದೆ.
ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾ ಮಹೋತ್ಸವಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡುವ ಸಂಪ್ರದಾಯವಿದೆ. ನಿರಂತರವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ, ಪರಂಪರೆ, ನಂಬಿಕೆಗಳಿಗೆ ವಿರುದ್ಧವಾಗಿ ಅವರನ್ನು ದಸರಾ ಉದ್ಘಾಟನಕಾರರನ್ನಾಗಿ ಮಾಡಿರುವುದು ಬಹಳಷ್ಟು ಜನರ ಅಸಮಾಧಾನಕ್ಕೆ ಅವಕಾಶ ಕಲ್ಪಿಸಿದೆ.
ವಿಜಯನಗರದ ಅರಸರು ಆರಂಭಿಸಿದ ದಸರಾ ಮಹೋತ್ಸವವನ್ನು ಅನಂತರ ಮೈಸೂರಿನ ಅರಸರು ಮುಂದುವರೆಸುತ್ತಾ ಬಂದಿದ್ದಾರೆ. ಈಗಲೂ ಅರಸು ಮನೆತನದವರು ಪ್ರತಿ ವರ್ಷ ಖಾಸಗಿಯಾಗಿ ದಸರಾ ಮಹೋತ್ಸವವನ್ನು ಮೈಸೂರು ಅರಮನೆಯಲ್ಲಿ ನೆರವೇರಿಸುತ್ತಾರೆ.
ಲಭ್ಯವಿರುವ ಮಾಹಿತಿ ಪ್ರಕಾರ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದಲೂ ರಾಜ್ಯ ಸರ್ಕಾರದಿಂದ ದಸರಾ ಆಚರಿಸುತ್ತಿದ್ದು, ಇದು ನಾಡಹಬ್ಬವಾಗಿದೆ. ಈಗಲೂ ದಸರಾ ಆಚರಣೆಯ ಮಹಾನವಮಿ ದಿಬ್ಬವನ್ನು ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕಾಣಬಹುದಾಗಿದೆ.
ಇದೇ ಮೊದಲಲ್ಲ:ದಸರಾ ಉತ್ಸವದ ಉದ್ಘಾಟನೆಗೆ ರಾಜ್ಯ ಸರ್ಕಾರ ಸಾಹಿತಿಯೊಬ್ಬರನ್ನು ಆಹ್ವಾನಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ್ ಕಂಬಾರ, ಗಿರೀಶ್ ಕಾರ್ನಾಡ್, ಖ್ಯಾತ ಕವಿಗಳಾದ ಕೆ.ಎಸ್.ನಿಸಾರ್ ಅಹದ್, ಚನ್ನವೀರ ಕಣವಿ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಚಿತ್ರ ಸಾಹಿತಿ ಹಂಸಲೇಖ, ಸಂಸದೆ ಸುಧಾ ನಾರಾಯಣಮೂರ್ತಿ ಅವರು ಕೂಡ ದಸರಾವನ್ನು ಉದ್ಘಾಟಿಸಿದ್ದಾರೆ.
ಅಲ್ಲದೆ, ಮಠಾಧೀಶರು, ವಿಜ್ಞಾನಿಗಳು, ರಾಜಕಾರಣಿಗಳು, ವೈದ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಕ್ಕೆ ಸೇರಿದವರು ಕೂಡ ದಸರಾವನ್ನು ಉದ್ಘಾಟಿಸಿರುವ ನಿದರ್ಶನವಿದೆ. ನಾಡ ಉತ್ಸವವಾಗಿರುವ ದಸರಾ ಉದ್ಘಾಟನೆಯು ಸಂಪ್ರದಾಯ, ಪರಂಪರೆ, ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಯಥಾರೀತಿ ನಡೆಯಬೇಕೆಂಬುದು ಬಹುತೇಕರಲ್ಲಿದೆ. ಇದಕ್ಕೆ ಯಾರ ಆಕ್ಷೇಪವೂ ಇದ್ದಂತಿಲ್ಲ.
ಮತಗಳ್ಳತನ ವಿರುದ್ಧದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಕೈ ಜೋಡಿಸಿದ ಸಿದ್ದರಾಮಯ್ಯ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


