ಬೆಳಗಾವಿ: ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಈ ಹಿಂದೆ 5 ವರ್ಷ ನಾನೇ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ ಇತ್ತೀಚೆಗೆ ಹೈಕಮಾಂಡ್ ಒಪ್ಪಿದರೆ ಐದು ವರ್ಷ ನಾನೇ ಸಿಎಂ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಹೀಗೆ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅನುಮಾನ ಹೊರಹಾಕಿದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದ್ದಿದ್ದು, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರ ಜತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯತ್ನಾಳ್ ನಾನು ಮೊದಲೇ ಹೇಳಿದ್ದೆನಲ್ಲ ಪಾಪ ಮಲ್ಲಿಕಾರ್ಜುನ ಖರ್ಗೆಯವರು ನನ್ನ ಜೀವನದಲ್ಲಿ ಒಂದು ದಿನವಾದರೂ ಸಿಎಂ ಆಗಬೇಕು ಎಂದು ಪಟ್ಟುಹಿಡಿದು ಕುಳಿತುಬಿಟ್ಟಿದ್ದಾರೆ. ಡಿಕೆ ಶಿವಕುಮಾರ್ ಕೂಡ ಬೇಡ, ಸತೀಶ್ ಜಾರಕಿಹೊಳಿ ಅವರೂ ಬೇಡ ಅಂತ ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಆರಿಸುತ್ತಾರೆ ನೋಡಿ. ಯಾರೂ ಸಿಎಂ ಆಗಲ್ಲ ದೆಹಲಿಯಿಂದ ಬ್ಲಾಕ್ ಹಾರ್ಸ್ ಬರುತ್ತೆ ನೋಡ್ತಾಯಿರಿ ಎಂದು ಹೇಳಿದರು.
ಇದೇ ಕಾರಣಕ್ಕೆ ಸಿದ್ದರಾಮಯ್ಯ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಪುತ್ರನ ಮೂಲಕ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿಸಿದ್ದೂ ಸಹ ಇದೇ ಕಾರಣಕ್ಕೆ. ಒಂದುವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಸತೀಶ್ ಜಾರಕಿಹೊಳಿ ಪರ ಇರುವ 70 ಶಾಸಕರನ್ನು ಕರೆದುಕೊಂಡು ಹೊರಗೆ ಬರುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು ಎಂದು ಯತ್ನಾಳ್ ತಿಳಿಸಿದರು.
ಅಲ್ಲದೇ ಸುಮ್ಮನೆ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲಿ ಯಾವ ಅಧಿಕಾರವೂ ಇಲ್ಲ, ದುಡ್ಡು ಸಹ ಉತ್ಪಾದನೆಯಾಗುತ್ತಿಲ್ಲ, ಅದಕ್ಕೆ ಅವರು ಸಿಎಂ ಆಗಲೇಬೇಕು ಎಂದು ಹಾತೊರೆಯುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು.
ವಿಜಯಪುರದಲ್ಲಿ ಸರಣಿ ಭೂಕಂಪ: 2 ತಿಂಗಳಲ್ಲಿ 11 ಬಾರಿ ಕಂಪನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


