ಬೆಂಗಳೂರು: ಟಿ 20 ಕ್ರಿಕೆಟ್ ತಂಡ ಆರ್‍ಸಿಬಿಯ ಪೇಜ್ ಹಿಂದಿಯಲ್ಲಿರುವ ಬಗ್ಗೆ ತಂಡದ ಮುಖ್ಯಸ್ಥರ ಗಮನ ಸೆಳೆಯಲಾಗುವುದು. ಬದಲಾವಣೆ ಮಾಡಿಕೊಳ್ಳದೇ ಇದ್ದರೆ ನೋಟೀಸ್ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಸಿಬಿ ನಮ ಕರ್ನಾಟಕದ ತಂಡ. ಅದು ಎಷ್ಟೀ ಬಾರಿ ಸೋತರೂ ಗೌರವ ಭಾವನೆ ಇದ್ದೇ ಇರುತ್ತದೆ. ಕನ್ನಡಿಗರಿಗೆ ನೋವುಂಟು ಮಾಡಬೇಡಿ ಎಂದು ಈಗಾಗಲೇ ಅವರಿಗೆ ಸೂಚನೆ ನೀಡಿದ್ದೇನೆ. ಹಿಂದಿಯಲ್ಲಿರುವ ಪೇಜ್ ಅನ್ನು ಬದಲಾವಣೆ ಮಾಡಿಕೊಡದೇ ಇದ್ದರೆ ಇಲಾಖೆಯ ಕಾರ್ಯದರ್ಶಿಯವರ ಮೂಲಕ ನೋಟೀಸ್ ಕೊಡಿಸುವುದಾಗಿ ಹೇಳಿದರು.
ವಿರೋಧಪಕ್ಷ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯವಿಲ್ಲ. ಹೀಗಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರ ನಿಲುವುಗಳೇನು ಎಂಬುದು ಪದೇಪದೇ ಕಾಡುವ ಪ್ರಶ್ನೆಯಾಗಿದೆ. ಅಭಿವೃದ್ಧಿಯಾಗಿಲ್ಲ ಎಂದು ದೂರುವ ಬಿಜೆಪಿಯವರು ತಮ ಕ್ಷೇತ್ರಕ್ಕೆ ಬಂದರೆ ಅಭಿವೃದ್ಧಿ ಕೆಲಸಗಳನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಈಗ ನಮ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆಯಾಗಿಲ್ಲ ಎಂದು ಹೇಳಿದರು.
ಸಂಪುಟ ಪುನಾರಚನೆ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಆಧರಿಸಿ ನಾವು ನಮ ನಿಲುವುಗಳನ್ನು ತಿಳಿಸುತ್ತೇವೆ. ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಪುನಾ ರಚನೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದರು.
ಹಾಸನದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸ್ವಾಭಿಮಾನಿ ಸಮಾವೇಶ ನಡೆಸುತ್ತಿರುವುದು ಶಕ್ತಿ ಪ್ರದರ್ಶನವಲ್ಲ. ಸಮಾವೇಶಕ್ಕೆ ನನಗೆ ಈವರೆಗೂ ಯಾರೂ ಆಹ್ವಾನ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


