ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿ ಭೇಟಿಯಾಗಿ ಡಿ.ಕೆ.ಶಿವಕುಮಾರ್ ಉಪಾಹಾರ ಸಭೆ ನಡೆಸಿದರು. ರಾಜ್ಯ ರಾಜಕೀಯದಲ್ಲಿ ಈ ಉಪಹಾರ ಸಭೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಉಪಹಾರಕೂಟದ ಬಳಿಕ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ‘ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಉಪಾಹಾರ ಸಭೆ ನಡೆಸಲಾಯಿತು’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ’ ಎಂದು ಪೋಸ್ಟ್ ಹಾಕಿದ್ದಾರೆ. ಈ ಉಪಹಾರಕೂಟದ ಬಳಿಕ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
- ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ಡಿ.ಕೆ.ಶಿವಕುಮಾರ್ ನಮ್ಮ ಮನೆಗೆ ಬಂದಿದ್ದರು. ನಾನು, ಡಿ.ಕೆ.ಶಿವಕುಮಾರ್ ಮತ್ತು ಎ.ಎಸ್.ಪೊನ್ನಣ್ಣ ಅವರು ಒಟ್ಟಿಗೆ ಉಪಹಾರ ಸೇವಿಸಿದೆವು ಎಂದು ಸಿದ್ದರಾಮಯ್ಯ ಹೇಳಿದರು.
- ನಮ್ಮ ಕೆ.ಸಿ.ವೇಣುಗೋಪಾಲ್ ಇಬ್ಬರಿಗೂ ಕರೆ ಮಾಡಿ ಒಟ್ಟಿಗೆ ಕೂತು ಮಾತನಾಡಿ ಎಂದು ಹೇಳಿದ್ದರು. ಡಿ.ಕೆ.ಶಿವಕುಮಾರ್ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ ನಾನೇ ನಮ್ಮ ಮನೆಗೆ ಉಪಹಾರಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆ ಎಂದರು.
- ಕೆಲವು ಅನಗತ್ಯ ಗೊಂದಲಗಳು ನಿರ್ಮಾಣವಾಗಿದೆ. ನಮಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮುಖ್ಯ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ಕುರಿತು ಚರ್ಚೆಗಳನ್ನು ಮಾಡಿದ್ದೇವೆ.
- ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಎದುರಿಸುವ ಕುರಿತು ನಾವು ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವವರು ಬಿಜೆಪಿ ಮತ್ತು ಜೆಡಿಎಸ್‌ನವರು ಎಂದು ಸಿದ್ದರಾಮಯ್ಯ ಟೀಕಿಸಿದರು.
- ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿಲ್ಲ. ಈ ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ. ಬಹಳ ಮುಖ್ಯವಾಗಿ ನಾವಿಬ್ಬರೂ ಸಹ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
- ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಸುಳ್ಳು ಆರೋಪವನ್ನು ಮಾಡುವುದು ಬಿಜೆಪಿ ಮತ್ತು ಜೆಡಿಎಸ್‌ನ ಚಾಳಿಯಾಗಿದೆ.
- ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಹೇಳಿದ್ದೆವು. ಆಗ ಕೆಲವು ಶಾಸಕರು ತಮ್ಮನ್ನು ಮಂತ್ರಿ ಮಾಡಿ ಎಂದು ದೆಹಲಿಗೆ ಹೋಗಿರಬಹುದು. ಆದರೆ ಅವರು ನನ್ನ ವಿರುದ್ಧ ಇದ್ದಾರೆ ಎಂದು ಅರ್ಥವಲ್ಲ.
ಡಿ.ಕೆ.ಶಿವಕುಮಾರ್ ಹೇಳಿಕೆಗಳು
- ಎಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನರಿಗೆ ನಾವು ಮಾತುಕೊಟ್ಟಿದ್ದೇವೆ. ಕೊಟ್ಟ ಮಾತಿನಂತೆ ಅವರ ನಿರೀಕ್ಷೆಗಳನ್ನು ಈಡೇರಿಸಲು ನಾವು ಕೆಲಸ ಮಾಡುತ್ತೇವೆ.
- ಡಿಸೆಂಬರ್ 8ರಿಂದ ಅಧಿವೇಶನ ಪ್ರಾರಂಭವಾಗಲಿದೆ. ವಿರೋಧ ಪಕ್ಷವನ್ನು ಹೇಗೆ ಎದುರಿಸಬೇಕು? ಎಂದು ನಾವು ಚರ್ಚೆ ಮಾಡಿದ್ದೇವೆ.
- ರಾಜಕೀಯವಾಗಿ ನಾವಿಬ್ಬರು ಸಹ ಪಕ್ಷದ ಹೈಕಮಾಂಡ್ ಹೇಳಿದಂತೆ ನಾವು ಕೆಲವ ಮಾಡುತ್ತೇವೆ, ಮುಂದೆಯೂ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿರುವುದು ಒಂದೇ ಗುಂಪು ಕಾಂಗ್ರೆಸ್ ಗುಂಪು. ಸಿದ್ದರಾಮಯ್ಯ ವಿರುದ್ಧ ನಾನು ಎಂದೂ ಒಂದು ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ನಮ್ಮಲ್ಲಿ ಗುಂಪುಗಾರಿಕೆಗೆ ಅವಕಾಶವೇ ಇಲ್ಲ.
- 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಬಲಪಡಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಸಂದೇಶವೇ ಅಂತಿಮ. ನಾವು ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


