ನವದೆಹಲಿ: ದಿನಕ್ಕೆ ಕೇವಲ 500ರಿಂದ 600 ರೂಪಾಯಿ ಗಳಿಸುವ ಹಾಗೂ ಎರಡು ಕೋಣೆಗಳ ಚಿಕ್ಕ ಮನೆಯಲ್ಲಿ ವಾಸಿಸುವ ಬೈಕ್-ಟ್ಯಾಕ್ಸಿ (ರಾಪಿಡೋ) ಚಾಲಕನೊಬ್ಬನ ಖಾತೆಯಲ್ಲಿ ಆತನಿಗೆ ಗೊತ್ತಿಲ್ಲದೆಯೇ 331.36 ಕೋಟಿ ರೂಪಾಯಿ ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
1ಎಕ್ಸ್‌ಬೆಟ್ ಆನ್‌ಲೈನ್ ಬೆಟ್ಟಿಂಗ್ ಜಾಲದ ಶಂಕಿತ ವ್ಯವಹಾರಗಳ ಕುರಿತು ಕಣ್ಣಾವಲಿಟ್ಟಿದ್ದ ಇ.ಡಿ.ಗೆ ಈ ಅಕ್ರಮದ ಸುಳಿವು ಲಭ್ಯವಾಗಿದೆ. ನಕಲಿ ಅಥವಾ ಬಾಡಿಗೆ ಕೆವೈಸಿ ವಿವರಗಳನ್ನು ಬಳಸಿ ನಿರ್ವಹಿಸಲಾಗುವ ಬ್ಯಾಂಕ್ ಖಾತೆಯೊಂದು ಗಮನಕ್ಕೆ ಬಂದಾಗ ಅದರ ಜಾಡು ಹಿಡಿದು ವಿಚಾರಣೆ ನಡೆಸಿದರು.
8 ತಿಂಗಳಲ್ಲಿ ಬಹುಕೋಟಿ ವಹಿವಾಟು: 2024ರ ಆಗಸ್ಟ್ 19ರಿಂದ 2025ರ ಏಪ್ರಿಲ್ 16ರ ನಡುವೆ ಚಾಲಕನ ಬ್ಯಾಂಕ್ ಖಾತೆಗೆ 331.36 ಕೋಟಿ ರೂಪಾಯಿ ಜಮಾ ಆಗಿತ್ತು. ಕೇವಲ ಎಂಟು ತಿಂಗಳ ಅಲ್ಪಾವಧಿಯಲ್ಲಿ ಬಹುಕೋಟಿ ರೂಪಾಯಿ ಮೊತ್ತದ ವ್ಯವಹಾರದಿಂದ ಅನುಮಾನ ಬಂದ ಅಧಿಕಾರಿಗಳು, ಖಾತೆಯ ದಾಖಲೆಗಳಲ್ಲಿ ನೀಡಲಾಗಿದ್ದ ಚಾಲಕನ ವಿಳಾಸದ ಮೇಲೆ ದಾಳಿ ಮಾಡಿದ್ದರು.
ಅಲ್ಲಿ ಚಾಲಕ ಎರಡು ಕೋಣೆಗಳ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದು ಕುಟುಂಬವನ್ನು ನಿಭಾಯಿಸಲು ಬಹುತೇಕ ಸಮಯ ರಾಪಿಡೋ ಚಾಲನೆಯಲ್ಲಿ ನಿರತರಾಗುತ್ತಿದ್ದು ಆತನ ಜೀವನ ಶೈಲಿಗೂ ಬ್ಯಾಂಕ್ ಖಾತೆಯ ವ್ಯವಹಾರಕ್ಕೂ ಅಜಗಜ ಅಂತರವಿದ್ದುದನ್ನು ನೋಡಿದರು. ಖಾತೆಯ ಡಿಪಾಸಿಟ್ ಬಗ್ಗೆಯಾಗಲೀ ಅದರ ಫಲಾನುಭವಿಗಳ ಕುರಿತಾಗಲೀ ತನಗೆ ಏನೂ ಗೊತ್ತಿಲ್ಲವೆಂದು ಚಾಲಕ ಹೇಳಿದ್ದಾನೆ. ಉದಯಪುರದಲ್ಲಿ 2024ರ ನವೆಂಬರ್‌ನಲ್ಲಿ ನಡೆದ ಅದ್ದೂರಿ ವಿವಾಹವೊಂದರ ಅಲಂಕಾರಕ್ಕಾಗಿ ಇದೇ ಖಾತೆಯಿಂದ ಒಂದು ಕೋಟಿ ರೂಪಾಯಿ ವರ್ಗಾವಣೆಯಾಗಿತ್ತು. ಅದು ಗುಜರಾತ್ ನ ಯುವ ರಾಜಕಾರಣಿಯೊಬ್ಬನ ಮದುವೆಯಾಗಿದ್ದು ಆತನನ್ನು ಇ.ಡಿ. ಪ್ರಶ್ನಿಸುವ ಸಾಧ್ಯತೆಯಿದೆ.
ಮೈಸೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಪೌರಕಾರ್ಮಿಕ ಹುದ್ದೆಗಳ ವಿಶೇಷ ನೇರ ನೇಮಕಾತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


