ಜಾತಿಗಣತಿ ಅಥವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಇಂದು ಅಂತ್ಯಗೊಳ್ಳಲಿದೆ. ಸರ್ಕಾರದ ಆದೇಶದಂತೆ ಸಮೀಕ್ಷೆಯಲ್ಲಿ ತೊಡಗಿದ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಿಗೆ ಸಂಭಾವನೆ ನಿಗದಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜನರ (ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ 22.09.2025 ರಿಂದ ಪ್ರಾರಂಭಿಸಲಾಗಿದ್ದು, ದಿನಾಂಕ 31.10.2025ರಂದು ಮುಕ್ತಾಯಗೊಳ್ಳಲಿದೆ ಎಂದು ಈಗಾಗಲೇ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
ಸಂಭಾವನೆ ವಿಚಾರದಲ್ಲಿ ಪತ್ರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಾತಿ ಗಣತಿಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಸಂಭಾವನೆ ನೀಡುವ ವಿಚಾರದಲ್ಲಿ ಆಯುಕ್ತರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮತ್ತು ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇವರಿಗೆ ಪತ್ರವೊಂದನ್ನು ಬರೆದಿದೆ.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಈ ಪತ್ರವನ್ನು ಬರೆದಿದ್ದಾರೆ. ಪತ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರ್ವಹಿಸಿದ ಸಮೀಕ್ಷಾದಾರರಿಗೆ ನೀಡಲಾಗುವ ಸಂಭಾವನೆ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಕುಟುಂಬ ಗಣತಿ ಕಾರ್ಯವು ದಿನಾಂಕ 22-09-2025 ರಿಂದ ಆರಂಭವಾಗಿ 31-10-2025ರ ತನಕ ಮುಂದುವರೆದಿದ್ದು, ಗಣತಿ ಕಾರ್ಯದಲ್ಲಿ ನಿಯೋಜನೆಗೊಂಡಿದ್ದ ರಾಜ್ಯದ ಅಧಿಕಾರಿ/ ನೌಕರರು ಅನೇಕ ಸಮಸ್ಯೆ/ ಸವಾಲುಗಳು ಹಾಗೂ ಕಷ್ಟಗಳ ಮಧ್ಯೆಯೂ ಗಣತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಆಯೋಗವು ಪ್ರತಿ ಮನೆಯ ಗಣತಿ ಕಾರ್ಯಕ್ಕೆ ರೂ. 100 ಗಳ ಸಮೀಕ್ಷಾ ಸಂಭಾವನೆ ನೀಡಲು ತಿಳಿಸಿರುತ್ತದೆ. ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿ ನೌಕರರಿಗೆ ಕುಟುಂಬಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಗಿರುತ್ತದೆ. ಹಾಗೆಯೇ, ಅಂತಹ ಕುಟುಂಬಗಳ ಗಣತಿ ಕಾರ್ಯದ ಜೊತೆಗೆ ಮಾಹಿತಿ ನಿರಾಕರಿಸಿದ ಕುಟುಂಬಗಳು, ಖಾಲಿ ಮನೆಗಳು ಹಾಗೂ ಇತರೆ UHID ಸಂಖ್ಯೆಗಳ ಗಣತಿ ಕಾರ್ಯವನ್ನೂ ಸಹ ಮಾಡಿರುತ್ತಾರೆ.
ಆದ್ದರಿಂದ, ಸಮೀಕ್ಷಾ ಕುಟುಂಬಗಳ ಜೊತೆಗೆ, ಮಾಹಿತಿ ನಿರಾಕರಿಸಿದ ಕುಟುಂಬಗಳು, ಖಾಲಿ ಮನೆಗಳು ಹಾಗೂ ಇತರೆ UHID ಗಣತಿ ಸಂಖ್ಯೆಗಳನ್ನು ಸಹ ಒಟ್ಟು ಸಮೀಕ್ಷೆ ಸಂಖ್ಯೆ ಎಂದು ಪರಿಗಣಿಸಿ ಗಣತಿದಾರರು ನಿರ್ವಹಿಸಿರುವ ಒಟ್ಟು ಸಂಖ್ಯೆಯಷ್ಟು ಮನೆಗಳ ಸಂಭಾವನೆಯನ್ನು ವಿಳಂಬಕ್ಕೆ ಅವಕಾಶ ನೀಡದೆ ಮಂಜೂರು ಮಾಡುವಂತೆ ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಂಭಾವನೆ ವಿವರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಕಾರ್ಯ ಮತ್ತು ಮೇಲ್ವಿಚಾರಕರ
ನಿರ್ವಹಿಸಿರುವ ಸಮೀಕ್ಷಾದಾರರ ಮಾಹಿತಿಯನ್ನು ಒದಗಿಸುವ ಬಗ್ಗೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಿಗೆ ಗೌರವ ಧನವನ್ನು ನಿಗದಿಪಡಿಸಿ ಆದೇಶಿಸಿದೆ. ಸಮೀಕ್ಷಾದಾರರು (Lump-sum ರೂ. 5000 ಹಾಗೂ ಪ್ರತಿ ಮನೆ ಸಮೀಕ್ಷೆಗೆ ರೂ. 100). ಮೇಲ್ವಿಚಾರಕರು 10,000 ರೂ.ಗಳು.
ಸಮೀಕ್ಷಾದಾರರಿಗೆ ಗೌರವ ಧನ ಪಾವತಿಸಲು ಮೊದಲನೇ ಕಂತಿನಲ್ಲಿ ತಲಾ ರೂ. 5,000 ದಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷೆದಾರರಿಗೆ ಬಾಕಿ ಮೊತ್ತ ಹಾಗೂ ಮೇಲ್ವಿಚಾರಕರಿಗೆ ಸಿಗದಿಪಡಿಸಿದ ಗೌರವ ಧನವನ್ನು ಬಿಡುಗಡೆ ಮಾಡಬೇಕಾಗಿದ್ದು, ನಿಗದಿತ ನಮೂನೆಯಲ್ಲಿ ಮಾಹಿತಿ ಒದಗಿಸಲು ಸೂಚಿಸಲಾಗಿದೆ.
ದಾವಣಗೆರೆ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಇದುವರೆಗೆ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಕೋರಿರುವ ಮಾಹಿತಿಯನ್ನು ಅತೀ ಜರೂರು ಎಂದು ಪರಿಗಣಿಸಿ, ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕಳುಹಿಸಲು ಸೂಚನೆ ಕೊಡಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


