ಖಾಸಗಿ ಬಸ್‌ಗಳ ಅಗ್ನಿ ಅವಘಡ ಪ್ರಕರಣಗಳ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದೆ. ಸಂಸ್ಥೆಯ ಬಸ್‌ಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಕುರಿತು ಎಲ್ಲಾ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿ ಹಿರಿಯ ಅಧಿಕಾರಿಗಳಿಗೆ ಟಿಪ್ಪಣಿ ಮೂಲಕ ಮಾಹಿತಿ ನೀಡಲಾಗಿದೆ. ಸಿಬ್ಬಂದಿಗಳು ಅವಶ್ಯಕ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚನೆಯನ್ನು ಸಹ ನೀಡಲಾಗಿದೆ.
ಸಂಸ್ಥೆಯ ಬಸ್ಸುಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿನಂದಕಗಳ ಉಪಯೋಗದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಹೆಚ್ಚು ಹೆಚ್ಚು ತರಬೇತಿ ನೀಡುವುದು. ಸಂಸ್ಥೆಯ ವಾಹನಗಳ/ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ ಎಂದು ಹೇಳಿದೆ.
ಯಾವ-ಯಾವ ಕ್ರಮಗಳು
- ಎಲ್ಲಾ ಪ್ರತಿಷ್ಠಿತ ರಾತ್ರಿ ಸಾರಿಗೆಯ ವಾಹನಗಳಲ್ಲಿ 5 ಲೀಟರ್‌ನ 2 ಅಗ್ನಿನಂದಕಗಳು, ಇತರೆ ವಾಹನಗಳಲ್ಲಿ ಅವಶ್ಯ ಅಗ್ನಿ ನಂದಕಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮೇಲೆ ಕಳುಹಿಸುವುದು.
- ಪ್ರತಿಷ್ಠಿತ ವಾಹನಗಳಲ್ಲಿ ಅಳವಡಿಸಿರುವ FDSS (Fire Detection & Suppression System), FAPS (Fire Alarm & Protection System) ಸದರಿ ಉಪಕರಣಗಳು ಸದಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಹಾಗೂ ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಅವುಗಳ ಕಾರ್ಯನಿರ್ವಹಣೆ ಬಗ್ಗೆ ತಿಳುವಳಿಕೆ ಮೂಡಿಸುವುದು.
- FDAS (Fire Detection & Alarm System)ಗಳು ಅಳವಡಿಸಿರುವ ವಾಹನಗಳಲ್ಲಿ ತುರ್ತು ಸಂದರ್ಭಗಳಲ್ಲಿ ವಾಹನದ ಚಾಲಕರು Emergency Button Press ಮಾಡಿ ವೋಟರ್ ಶಬ್ದದೊಂದಿಗೆ ಎಚ್ಚರಿಸುವ ಬಗ್ಗೆ ಚಾಲಕರಿಗೆ ತರಬೇತಿ/ ಮಾಹಿತಿಯನ್ನು ನೀಡುವುದು ಪ್ಯಾನಿಕ್ ಬಟನ್‌ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಿಕೊಳ್ಳುವುದು. ಪ್ಯಾನಿಕ್ ಬಟನ್‌ಗಳು ಇಲ್ಲದಿದ್ದಲ್ಲಿ ಅವುಗಳನ್ನು ಅಳವಡಿಸಲು ತಕ್ಷಣ ಕ್ರಮ ವಹಿಸುವುದು.
- ಪ್ರತಿ ನಿತ್ಯ ಕಾರ್ಯಾಚರಣೆಗೊಳ್ಳುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ವೈರ್‌ಗಳು ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆಗೆ ಒಳಪಡಿಸುವುದು ಮತ್ತು ಎಲ್ಲಾ ವಾಹನಗಳಲ್ಲಿ ಬ್ಯಾಟರಿ ಕಟ್‌ಆಫ್ ಸ್ವಿಚ್‌ಗಳು ಸುಸ್ಥಿತಿಯಲ್ಲಿರುವ ಕುರಿತು ಸಮೀಕ್ಷೆ ನಡೆಸಿ ಅವುಗಳು ಕಾರ್ಯ ನಿರ್ವಹಿಸದಿದ್ದಲ್ಲಿ ದುರಸ್ಥಿಪಡಿಸುವುದು ಮತ್ತು ಎಲೆಕ್ಟಿಕಲ್ ವೈರುಗಳು ವಾಹನದ ಮೆಟಲ್‌ಗೆ ಉಜ್ಜುವಿಕೆಯಿಂದ ಉಂಟಾಗಬಹುದಾದ ಅವಘಡಗಳನ್ನು ತಪ್ಪಿಸಲು ಬ್ಯಾಟರಿ ಕೇಬಲ್‌ಗೆ ಸ್ಟೀವ್‌ಗಳು ಮತ್ತು ರಬ್ಬರ್ ಗೋಮೇಟ್ ಬುಷ್‌ಗಳನ್ನು ಅಳವಡಿಸುವುದು.
- ಎಲ್ಲಾ ಎಸಿ ವಾಹನಗಳಲ್ಲಿ ಕಿಟಕಿ ಗ್ಲಾಸ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಬ್ರೇಕ್ ಮಾಡುವ ಹ್ಯಾಮರ್‌ಗಳು ಅಳವಡಿಕೆಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಹ್ಯಾಮರ್‌ಗಳು ವಾಹನಗಳಲ್ಲಿ ಅಳವಡಿಸದಿದ್ದಲ್ಲಿ ಅಳವಡಿಸಿಯೇ ಕಾರ್ಯಾಚರಣೆ ಮಾಡಲು ಅಗತ್ಯ ಕ್ರಮ ವಹಿಸುವುದು.
- ರಾತ್ರಿ ವೇಳೆಯಲ್ಲಿ ಸೊಳ್ಳೆ ನಿಯಂತ್ರಿಸಲು ಚಾಲನಾ ಸಿಬ್ಬಂದಿಗಳು ಸೊಳ್ಳೆ ಕಾಯಲ್‌ಗಳನ್ನು ಹಚ್ಚದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವುದು.
- ಎಲ್ಲಾ ವಾಹನಗಳ ತುರ್ತು ಬಾಗಿಲುಗಳು/ ಪ್ರಯಾಣಿಕರ ಬಾಗಿಲುಗಳು/ ಚಾಲಕರ ಬಾಗಿಲುಗಳು ಕಾರ್ಯ ನಿರ್ವಹಿಸುವ/ ಸುಸ್ಥಿತಿಯಲ್ಲಿರುವ ಬಗ್ಗೆ ಸಮೀಕ್ಷೆ ನಡೆಸಿ ಕಾರ್ಯಾಚರಣೆ ಮೇಲೆ ಕಳುಹಿಸುವುದು.
- ವಾಹನಗಳ ಕಾರ್ಯಾಚರಣೆ ವೇಳೆ ಲಗೇಜ್ ಅನ್ನು ಸ್ವೀಕರಿಸುವಂತಹ ಚಾಲನಾ ಸಿಬ್ಬಂದಿಗಳು ಬೆಂಕಿಯನ್ನು ಆಕರ್ಷಿಸಿಸುವಂತಹ ವಸ್ತುಗಳನ್ನು/ ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ನಿಷೇಧಿತ ವಸ್ತುಗಳನ್ನು ಸಾಗಾಣಿಕೆ ಮಾಡದಂತೆ ಚಾಲನಾ ಸಿಬ್ಬಂದಿಗಳಿಗೆ ಆಗಿಂದಾಗ್ಗೆ ಸೂಕ್ತ ತಿಳುವಳಿಕೆ ಮೂಡಿಸುವುದು.
- ಈ ಕುರಿತು ಸಂಸ್ಥೆಯ ಬಸ್‌ಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಅಗ್ನಿಶಾಮಕ ದಳ/ ಪೊಲೀಸ್ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳಿಂದ ವಿಶೇಷ ಕಾರ್ಯಾಗಾರಗಳನ್ನು ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ತಲುಪುವ ರೀತಿಯಲ್ಲಿ ಪ್ರತಿ ನಿತ್ಯ ಬೆಳಿಗ್ಗೆ, ಸಂಜೆ ನಡೆಸುವುದು ಮತ್ತು ನಡೆಸಿದ ಕುರಿತು ಫೋಟೋ ಸಮೇತ ಅನುಸರಣಾ ವರದಿಗಳನ್ನು ಕಳುಹಿಸುವುದು.
- ಎಲ್ಲಾ ಬಸ್ ನಿಲ್ದಾಣಗಳಲ್ಲಿ VRITI Solution/ ಇತರೆ ಏಜೆನ್ಸಿ ಮೂಲಕ ಬಿತ್ತರಿಸುವ ಆಡಿಯೋದಲ್ಲಿ ಪ್ರಯಾಣಿಕರು ಅಗ್ನಿಯನ್ನು ಆಕರ್ಷಿಸಿಸುವ ವಸ್ತುಗಳನ್ನು ಸಂಸ್ಥೆಯ ಬಸ್ಸುಗಳಲ್ಲಿ ಕೊಂಡೊಯ್ಯಲು ಅವಕಾಶವಿರುವುದಿಲ್ಲ ಎಂಬುದನ್ನು ಆಗಿಂದಾಗ್ಗೆ ವಿಡಿಯೋ/ ಆಡಿಯೋ ಮೂಲಕ ಪ್ರಸ್ತುತ ಪಡಿಸುವುದು.
- ಎಲ್ಲಾ ವಾಹನಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಯಾಂತ್ರಿಕ ಇಲಾಖೆಯಿಂದ ಚೆಕ್‌ಲಿಸ್ಟ್ ಅನ್ನು ಎಲ್ಲಾ ವಿಭಾಗಗಳಿಗೆ ಕಳುಹಿಸಿ, ಅವುಗಳನ್ನು ಪರಿಶೀಲಿಸಲು ಕೂಡಲೇ ಕ್ರಮ ವಹಿಸುವುದು.
- ಟಿಕೇಟ್/ ರಿಸರ್ವೇಷನ್ ಟಿಕೇಟ್ ಮೇಲೆ ಸಂಸ್ಥೆಯ ವಾಹನದಲ್ಲಿ ಅಗ್ನಿಯನ್ನು ಆಕರ್ಷಿಸಿಸುವ ವಸ್ತುಗಳ ಸಾಗಣಿಕೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು, ಆಕಸ್ಮಿಕವಾಗಿ ಸಂಭವಿಸುವ ಬೆಂಕಿ ಅವಘಡ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚಿತ್ರಾತ್ಮಕ ರೂಪದಲ್ಲಿ ಮುದ್ರಿಸಲು ಗಣಕ ಇಲಾಖೆ/ ಸಂಚಾರ(ವಾ) ಇಲಾಖೆಯಿಂದ ಅಗತ್ಯ ಕ್ರಮ ವಹಿಸುವುದು.
- ನಿಗಮದ ತರಬೇತಿ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡುವ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಅಪಘಾತ/ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಮೇಲೆ ವಿವರಿಸಿದ ಹಾಗೂ ಅನುಬಂಧ ಅ ರಲ್ಲಿನ ಅಂಶಗಳ ಕುರಿತು ತಪ್ಪದೇ ತರಬೇತಿ ನೀಡಲು ಕ್ರಮ ವಹಿಸುವುದು.
- ವಿಭಾಗಗಳ ಉಸ್ತುವಾರಿ ಅಧಿಕಾರಿಗಳು ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸುವುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


