ಬಿಹಾರ ವಿಧಾನಸಭೆ ಚುನಾವಣೆ 2025ಕ್ಕೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಿಜೆಪಿ-ಜೆಡಿಯು ಮತ್ತು ಎಲ್‌ಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮೈತ್ರಿಕೂಟದ ಮೂಲಕ ಬಿಹಾರದ ಚುನಾವಣೆಯನ್ನು ಎದುರಿಸುತ್ತಿವೆ.
ಶುಕ್ರವಾರ ಪಾಟ್ನಾದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ನಾಯಕರು ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಿಹಾರದ 243 ಕ್ಷೇತ್ರಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
‘ಎನ್‌ಡಿಎ ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಎನ್‌ಡಿಎ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಅತಿ ಹೆಚ್ಚು ಯುವಕರು ವಲಸೆ ಹೋಗುವ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಎನ್‌ಡಿಎ ಆದ್ಯತೆ ನೀಡಿದ್ದು, 1 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದೆ. 69 ಪುಟಗಳ ಪ್ರಣಾಳಿಕೆಯಲ್ಲಿ 25 ಭರವಸೆ ನೀಡಲಾಗಿದೆ.
ಎನ್‌ಡಿಎ ಪ್ರಣಾಳಿಕೆ ಭರವಸೆಗಳು
- 1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ
- 4 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ಮಾಣ
- 7 ಎಕ್ಸ್‌ಪ್ರೆಸ್ ವೇಗಳ ನಿರ್ಮಾಣ
- 1 ಕೋಟಿ ಮಹಿಳೆಯರನ್ನು ಲಕ್ಷಪತಿ ದೀದಿಯಾಗಿ ಪರಿವರ್ತನೆ ಮಾಡಲು ಯೋಜನೆ
- ಕೌಶಲ್ಯ ಆಧಾರಿತವಾಗಿ ಯುವಕರಿಗೆ ಉದ್ಯೋಗ ಒದಗಿಸಲು ಕೌಶಲ್ಯ ಜನಗಣತಿ ಮಾಡುವುದು
- ಪ್ರತಿ ಜಿಲ್ಲೆಯಲ್ಲಿ ಮೆಗಾ ಕೌಶಲ್ಯ ಕೇಂದ್ರ ಸ್ಥಾಪನೆ
- 10 ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ
- ನಾಲ್ಕು ಹೊಸ ಮೆಟ್ರೋ ಮಾರ್ಗ ನಿರ್ಮಾಣ
- ಎಸ್‌ಸಿ ಸಮುದಾಯದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮಾಸಿಕ 2 ಸಾವಿರ ರೂ. ಸಹಾಯಧನ
- 5 ವರ್ಷಗಳಲ್ಲಿ ಪ್ರವಾಹ ರಹಿತ ಬಿಹಾರ ನಿರ್ಮಾಣದ ಗುರಿ
- ಕಪುರಗಡಿ ಠಾಕೂರ್ ಕೃಷಿ ಸಮ್ಮಾನ ನಿಧಿ ಯೋಜನೆಯಡಿ ರೈತರಿಗೆ ವರ್ಷಕ್ಕೆ 3,000 ರೂ. ನೆರವು
- ಉಚಿತ ಪಡಿತರ, 125 ಯೂನಿಟ್ ಉಚಿತ ವಿದ್ಯುತ್, 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, 50 ಲಕ್ಷ ಹೊಸ ಪಕ್ಕಾ ಮನೆ ಮತ್ತು ಬಡವರಿಗೆ ಸಾಮಾಜಿಕ ಭದ್ರತಾ ಪಿಂಚಣಿ
- ವೋಕಲ್ ಫಾರ್ ಲೋಕಲ್ ಅಡಿ 100 ಎಂಎಸ್‌ಎಂಇ ಪಾರ್ಕ್ ನಿರ್ಮಾಣ
- ಅತಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ತಿಳಿಯಲು ನಿವೃತ್ತ ಸುಪ್ರೀಂಕೋರ್ಟ್ ಜಡ್ಜ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
- ಮುಖ್ಯಮಂತ್ರಿಗಳ ಮಹಿಳಾ ಉದ್ಯೋಗ ಯೋಜನೆ. ಮಹಿಳೆಯರಿಗೆ 2 ಲಕ್ಷದವರೆಗೆ ಆರ್ಥಿಕ ಸಹಾಯ ನೀಡಲಾಗುವುದು
ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 101, ಜೆಡಿಯು 101, ಎಲ್‌ಜೆಪಿಪಿ (ಆರ್) 29, ಆರ್‌ಎಲ್‌ಎಂ 6 ಮತ್ತು ಹೆಚ್‌ಎಎಂ ಪಕ್ಷಗಳು 6 ಸೀಟುಗಳನ್ನು ಹಂಚಿಕೊಂಡಿವೆ. ಆದರೆ ಮೈತ್ರಿಕೂಟ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮಹಾಘಟಬಂಧನ್ ಎದುರಾಳಿ. ಈ ಮೈತ್ರಿಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ(ಎಂಎಲ್), ವಿಐಪಿ, ಸಿಪಿಐ(ಎಂ) ಪಕ್ಷಗಳಿವೆ. ತೇಜಸ್ವಿ ಯಾದವ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ಈ ಮೈತ್ರಿಕೂಟ ‘ಬಿಹಾರ ಕಾ ತೇಜಸ್ವಿ ಪ್ರಣ್’ ಎಂಬ ಶೀರ್ಷಿಕೆಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸರ್ಕಾರ ರಚನೆಯಾದ 20 ದಿನಗಳ ಒಳಗೆ ರಾಜ್ಯದ ಪ್ರತಿಯೊಂದು ಕುಟುಂಬದ ಕನಿಷ್ಠ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಭರವಸೆ ಕೊಟ್ಟಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


