Monday, August 31, 2026
spot_img
More
    spot_img
    HomeLatest newsಬ್ಯಾಲಟ್‌ ಪೇಪರ್‌ ಚುನಾವಣೆ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದ ವಿಜಯೇಂದ್ರ

    ಬ್ಯಾಲಟ್‌ ಪೇಪರ್‌ ಚುನಾವಣೆ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದ ವಿಜಯೇಂದ್ರ

    ಬೆಂಗಳೂರು: ಮುಂದಿನ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ (ಬ್ಯಾಲಟ್‌ ಪೇಪರ್‌ ) ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್‌‍ ಸರ್ಕಾರದ ಸಂಪುಟದ ತೀರ್ಮಾನ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಮಾಣೀಕರಿಸಿಕೊಂಡಂತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಂಶಯ ಹೊರಹಾಕಿದ್ದಾರೆ.

    Advertisement

    ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ಇವಿಎಂ ಮತಯಂತ್ರ ಬಳಸಿ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್‌‍ ಶಾಸಕರಿಂದ ಮೊದಲು ರಾಜೀನಾಮೆ ಕೊಡಿಸಲಿ, ರಾಜ್ಯದಿಂದ ಆಯ್ಕೆಯಾದ ಒಂಬತ್ತು ಕಾಂಗ್ರೆಸ್‌‍ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸಲಿ, ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿರುವುದು ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

    ದೇಶದಲ್ಲಿ ಅತಿಹೆಚ್ಚು ಅಕ್ರಮ ಮತದಾನ, ಮತಗಳ್ಳತನದ ದೂರುಗಳು, ಚುನಾವಣಾ ದೌರ್ಜನ್ಯದ ಘಟನೆಗಳು, ಚುನಾವಣಾ ಅಕ್ರಮಗಳು ನಡೆದ ಬಗ್ಗೆ ನ್ಯಾಯಾಲಯಗಳಲ್ಲಿ ದೂರುಗಳು ಅತಿ ಹೆಚ್ಚು ದಾಖಲಾಗಿದ್ದರೆ ಅದು ಮತಪತ್ರ ಆಧರಿಸಿ ನಡೆಸಿದ ಚುನಾವಣೆಗಳಲ್ಲಿ , ಅದೂ ಕಾಂಗ್ರೆಸ್ಸಿಗರ ಮೇಲೇ ಹೆಚ್ಚು ಎಂಬುದನ್ನು ಕಾಂಗ್ರೆಸ್ಸಿಗರು ಇತಿಹಾಸದ ಪುಟಗಳನ್ನು ತೆರೆದು ನೋಡಲಿ. ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣವಾಗಿದ್ದು ಅವರು ನಡೆಸಿದ ಮತಗಳ್ಳತನ ಹಾಗೂ ಅಕ್ರಮ ಚುನಾವಣೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಿಂದ ಎಂಬ ಇತಿಹಾಸವನ್ನು ದೇಶದ ಜನ ಮರೆತಿಲ್ಲ ಎಂದು ಎಚ್ಚರಿಸಿದ್ದಾರೆ.

    ಮತ ಪತ್ರ ಆಧರಿಸಿದ ಚುನಾವಣೆಗಳಲ್ಲಿ ಅಕ್ರಮ ಹಾಗೂ ಮತಗಳ್ಳತನ ನಡೆಸುವುದರಲ್ಲಿ ನಿಷ್ಣಾತರಾದ ಕಾಂಗ್ರೆಸ್ಸಿಗರು ಚುನಾವಣೆಗಳ ನಿರಂತರ ಸೋಲುಗಳಿಂದ ಮೂಲೆಗುಂಪಾಗುತ್ತಿರುವ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಈ ಕಾರಣದಿಂದಾಗಿ ಆಧಾರ ರಹಿತ, ಅಪ್ರಬುದ್ಧ, ವಿತಂಡ ವಾದವನ್ನು ಮುಂದಿಟ್ಟುಕೊಂಡು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಬಾಲಿಶ ವಿವಾದ ಹುಟ್ಟು ಹಾಕಲು ಹೊರಟಿದ್ದಾರೆ. ಇದನ್ನು ಬೆಂಬಲಿಸಲು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌‍ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರವನ್ನು ಬಳಸಿ ಚುನಾವಣೆ ನಡೆಸುವುದಾಗಿ ನಿರ್ಣಯ ಕೈಗೊಂಡಿದೆ. ಇಡೀ ದೇಶ, ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ತಂತ್ರಜ್ಞಾನವನ್ನು ಅಪಮಾನಿಸಿ ಹೆಬ್ಬೆಟ್ಟಿನ ದಿನಗಳನ್ನು ನೆನಪಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್‌‍ ಸರ್ಕಾರ ಅಧಿಕಾರವಿದ್ದ ಅವಧಿಯಲ್ಲಿ ಮತಪತ್ರ ಬಳಸಿ ನಡೆದ ಚುನಾವಣೆಗಳಲ್ಲಿ ಎಷ್ಟು ಅಕ್ರಮ ನಡೆದಿದೆ ಎನ್ನುವುದಕ್ಕೆ ಇವತ್ತಿಗೂ ದಾಖಲೆಗಳಿವೆ. 90ರ ದಶಕದಲ್ಲಿ ದಾವಣಗೆರೆಯಲ್ಲಿ ಜಯಗಳಿಸಿದ್ದ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಮರು ಎಣಿಕೆಯಲ್ಲಿ ಸೋಲಿಸಿ ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಗೆಲ್ಲಿಸಲಾಯಿತು. ಬಿಜೆಪಿ ಅಭ್ಯರ್ಥಿಯ ಮತ್ರ ಪತ್ರಗಳನ್ನು ಹೇಗೆ ತಿರಸ್ಕೃತಗೊಳಿಸಲಾಯಿತು ಎಂಬುದಕ್ಕೆ ಅಂದು ದಾವಣಗೆರೆಯ ಮತ ಎಣಿಕೆ ಕೇಂದ್ರದ ಶೌಚಾಲಯಗಳಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಯ ಮತ ಪತ್ರಗಳು ಚೆಲ್ಲಾಡಿರುವುದನ್ನು ಅಂದು ಮಾಧ್ಯಮಗಳು ವರದಿ ಮಾಡಿದ್ದವು ಎಂಬುದನ್ನು ನೆನಪಿಸಿದ್ದಾರೆ.

    ಮತಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮ ಎಸಗಬಹುದು, ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೇ ಕಳ್ಳ ಮತದಾನವನ್ನೂ ಮಾಡಬಹುದು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್‌‍ ಮತ ಪತ್ರ ಆಧರಿಸಿದ ಚುನಾವಣೆಯನ್ನು ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ಬೆಂಬಲಿಸುತ್ತಿದೆ, ಅದನ್ನು ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ಜಾರಿಗೊಳಿಸಲು ಮೊದಲ ಹೆಜ್ಜೆ ಇಡಲು ಹೊರಟಿದೆ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕ ಚುನಾವಣೆಯನ್ನು ಧಿಕ್ಕರಿಸುವುದೇ ಕಾಂಗ್ರೆಸ್‌‍ನ ಅಜೆಂಡಾ ಹಾಗೂ ಗುರಿಯಾಗಿದೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ.

    BIG NEWS: ಮೈಸೂರು ದಸರಾ ಗಜಪಯಣ ಚಾಲನೆ ದಿನಾಂಕ ಘೋಷಣೆ; ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್‌

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading