ವಾಷಿಂಗ್ಟನ್: ಭಾರತ, ಅಮೆರಿಕ ನಡುವೆ ಸುಂಕ ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಇಂತಹ ನಿರ್ಣಾಯಕ ಸಮಯದಲ್ಲಿ ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಅವರು ಡೊನಾಲ್ಡ್ ಟ್ರಂಪ್‍ಗೆ ಸಲಹೆ ನೀಡಿದ್ದಾರೆ.
ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರ ಪ್ರಸ್ತಾಪಗಳು ನಿರ್ಣಾಯಕ ಸಂದರ್ಭದಲ್ಲಿ ಭಾರತ-ಅಮೆರಿಕದ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ನಿಕ್ಕಿ, ಟ್ರಂಪ್ ಆಡಳಿತವು ದ್ವಿಮುಖ ನೀತಿ ಅಳವಡಿಸಿಕೊಂಡಿದೆ. ಚೀನಾದಂತಹ ಶತ್ರು ರಾಷ್ಟ್ರಕ್ಕೆ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯ್ತಿ ನೀಡಿದೆ. ಆದರೆ ಭಾರತದ ಮೇಲೆ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಟ್ರಂಪ್ ಹೇಳುತ್ತಾರೆ. ಆದರೆ ರಷ್ಯಾ ಮತ್ತು ಇರಾನ್‍ನ ಅತಿದೊಡ್ಡ ತೈಲ ಖರೀದಿದಾರ ಚೀನಾಗೆ 90 ದಿನಗಳ ಸುಂಕ ವಿನಾಯ್ತಿ ಕೊಡುತ್ತಾರೆ. ಇದು ಒಳ್ಳೆಯದಲ್ಲ. ಚೀನಾದಂಥ ಶತ್ರು ರಾಷ್ಟ್ರಕ್ಕೆ ರಿಯಾಯತಿ ನೀಡಬೇಡಿ. ಹಾಗೆಯೇ ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಆಗಸ್ಟ್ 1ರಿಂದ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.25ರಷ್ಟು ಹೆಚ್ಚಿಸುವುದಾಗಿ ಟ್ರಂಪ್ ಸಿಎನ್‍ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೊಸ ಒಪ್ಪಂದದಲ್ಲಿ ಭಾರತವು ಅಮೆರಿಕದ ಸರಕುಗಳ ಮೇಲೆ ಶೂನ್ಯ ಸುಂಕವನ್ನು ಪ್ರಸ್ತಾಪಿಸಿದ್ದು, ನಾವು ವಿರೋಧಿಸುವ ಯುದ್ಧಕ್ಕೆ ಅವರು ಹಣಕಾಸು ಒದಗಿಸುತ್ತಿದ್ದರೆ, ಶೂನ್ಯ ಸುಂಕಗಳು ವಿಧಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಭಾರತವು ತನ್ನ ಇಂಧನ ನೀತಿಯನ್ನು ಪದೇ ಪದೇ ಸಮರ್ಥಿಸಿಕೊಂಡಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕೈಗೆಟುಕುವ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ತೈಲವನ್ನು ಖರೀದಿಸುತ್ತದೆ ಎಂದು ಹೇಳುತ್ತದೆ. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಸಹ ರಷ್ಯಾದೊಂದಿಗೆ ವ್ಯಾಪಾರ ಮತ್ತು ಇಂಧನ ಸಂಬಂಧಗಳನ್ನು ಹೊಂದಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಆರ್‌ಬಿಐ : ಸಾಲಗಾರರಿಗೆ ಶುಭ ಸುದ್ದಿ RBI ರೆಪೋ ದರ ಯಥಾಸ್ಥಿತಿ 5.5% ಮುಂದುವರಿಕೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


