Sunday, September 20, 2026
spot_img
More
    spot_img
    HomeStateDistrictಹೆಚ್.ವೈ.ಮೇಟಿ ಕನಸು ಈಡೇರಿಸುವೆ: ಬಾಗಲಕೋಟೆ ಜನರಿಗೆ ಸಿಎಂ ಭರವಸೆ

    ಹೆಚ್.ವೈ.ಮೇಟಿ ಕನಸು ಈಡೇರಿಸುವೆ: ಬಾಗಲಕೋಟೆ ಜನರಿಗೆ ಸಿಎಂ ಭರವಸೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯ ಶಾಸಕ, ಮಾಜಿ ಸಚಿವ ಹೆಚ್.ವೈ.ಮೇಟಿ ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದರು. ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮೇಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ಆತ್ಮೀಯನಿಗೆ ಅಂತಿಮ ನಮನ ಸಲ್ಲಿಸಿದರು. ಹೆಚ್.ವೈ.ಮೇಟಿ ಕನಸಿನ ಕುರಿತು ಮಾತನಾಡಿದರು.

    Advertisement

    ಸಿದ್ದರಾಮಯ್ಯ ಮಾತನಾಡಿ, “ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಮೇಟಿಯವರು ಈ ಸಂದರ್ಭದಲ್ಲಿ ಇಲ್ಲದಿರುವುದು ವಿಷಾದನೀಯ. ಅವರ ಆಸೆಯಂತೆ ಟೆಂಡರ್ ಕೂಡ ಈಗಾಗಲೇ ಕರೆಯಲಾಗಿದೆ. ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗುವುದು” ಎಂದು ಭರವಸೆ ನೀಡಿದರು.

    “1983ರಿಂದ ಹೆಚ್.ವೈ.ಮೇಟಿಯವರೊಂದಿಗೆ ಒಡನಾಡವಿತ್ತು. ನಾನು ಜನತಾ ಪಕ್ಷ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಾನು ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿದ್ದರು. ಅಹಿಂದ ಸಂಘಟನೆಯಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಹೆಚ್.ವೈ.ಮೇಟಿಯವರು ನಿಷ್ಠಾವಂತ ರಾಜಕಾರಣಿಯಾಗಿದ್ದರು. ನಾನು ಒಂದು ವರ್ಷ ಕಿರಿಯನಾಗಿದ್ದರೂ, ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು” ಎಂದು ಸಿದ್ದರಾಮಯ್ಯ ನೆನಪು ಮಾಡಿಕೊಂಡರು.

    “ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೇಟಿಯವರು ವಿನಯವಂತರಾಗಿದ್ದರು. ಅಧಿಕಾರ ಶಾಶ್ವತವಾದುದಲ್ಲ, ಜನರಿಂದ ದೊರಕುವ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕು. ಬಹಳ ವಿದ್ಯಾವಂತರಲ್ಲದಿದ್ದರೂ, ರಾಜಕೀಯ ತತ್ವಗಳನ್ನು ತಪ್ಪದೇ ಪಾಲಿಸುತ್ತಿದ್ದರು. ಜನರೊಂದಿಗೆ ಬೆರೆಯುವ ಗುಣವಿದ್ದ ಮೇಟಿಯವರು ಕುರುಬ ಸಮುದಾಯದವರಾಗಿದ್ದರೂ, ಜಾತ್ಯಾತೀತ ತತ್ವದ ಪಾಲಕರಾಗಿದ್ದರು. ಎಲ್ಲ ಜಾತಿಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು” ಎಂದರು.

    ಲೋಕಸಭೆ ಚುನಾವಣೆ ಸ್ಪರ್ಧೆ: “ಮೇಟಿಯವರ ನಿಧನದಿಂದ ದು:ಖವಾಗಿದ್ದು, ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. 1996ರಲ್ಲಿ ಬಾಗಲಕೋಟೆಯಲ್ಲಿ ಸಮೀಕ್ಷೆ ಮಾಡಿಸಿ, ಮೇಟಿಯವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ನಿರ್ಧಾರವಾಗಿತ್ತು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಮೇಟಿಯವರು, ನನ್ನ ಮಾತನ್ನು ಗೌರವಿಸಿ, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಸಾಧಿಸಿದರು. ಜನಾನುರಾಗಿಯಾಗಿದ್ದರೆ ಮಾತ್ರ ಬಾಗಲಕೋಟೆ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ದೇವೇಗೌಡರು ಪ್ರಧಾನಮಂತ್ರಿಗಳಾಗಲು ಇವರು ಕಾರಣಕರ್ತರು” ಎಂದು ಲೋಕಸಭೆ ಚುನಾವಣೆ ನೆನಪಿಸಿಕೊಂಡರು.

    “ಅವರ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತೆಂದರೆ ಬಾಗಲಕೋಟೆಯಲ್ಲಿ ಒಬ್ಬ ಕುರುಬ ಸಮುದಾಯದವರು ಗೆಲ್ಲುವುದು ಸುಲಭದ ಮಾತಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿತ್ತು. ಸಂಭಾವಿತ ರಾಜಕಾರಣಿ ಎಂದರೆ ಅತಿಶಯೋಕ್ತಿಯಲ್ಲ. ವೈರಿಗಳೊಂದಿಗೂ ಚೆನ್ನಾಗಿರುತ್ತಿದ್ದ ವಿಶಿಷ್ಟ ಗುಣಗಳಿದ್ದ ರಾಜಕಾರಣಿಯಾಗಿದ್ದರು. ಪಂಚಾಯತಿ ಹಾಗೂ ಎ.ಪಿ.ಎಂ.ಸಿ ಅಧ್ಯಕ್ಷರಾಗಿ, ಸಚಿವ ಸ್ಥಾನವನ್ನು ಅಲಂಕರಿಸುವುದು ಸುಲಭದ ಮಾತಲ್ಲ. ಹಂತ ಹಂತವಾಗಿ ಮೆಟ್ಟಿಲುಗಳನ್ನು ಏರಿಕೊಂಡು ಬೆಳೆದವರು” ಎಂದು ಸ್ಮರಿಸಿದರು.

    “ಈ ಬಾರಿ ಮುಖ್ಯಮಂತ್ರಿಯಾದ ಮೇಲೆ ನನ್ನ ಬಳಿ ಅಪರೂಪಕ್ಕೆ ಬರುತ್ತಿದ್ದರು. ರಾಜಕೀಯ ಕ್ಷೇತ್ರಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ. ನನ್ನ ಅನುಯಾಯಿಗಳಲ್ಲಿ ಮೇಟಿ ಅಗ್ರಗಣ್ಯರು. ಸರಳ ಸಜ್ಜನಿಕೆಯ ವ್ಯಕ್ತಿ. ಆಸೆ, ದುರಾಸೆಗಳಿದ್ದ ವ್ಯಕ್ತಿಯಾಗಿರಲಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಇವರ ಸಾವಿನಿಂದ ಬಡವಾಗಿದೆ” ಎಂದರು.

    “ಹುಟ್ಟು ಆಕಸ್ಮಿಕ, ಸಾವು ಖಚಿತ, ಇವೆರಡರ ಮಧ್ಯೆ ಇರುವ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಮುಖ್ಯ. ಮೇಟಿಯವರು ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಆದರ್ಶಗಳು ಇತರರಿಗೆ ಮಾದರಿಯಾಗಲಿ. ಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ. ಮೇಟಿಗೆ ಮೇಟಿಯೇ ಸಾಟಿ. ಜನರ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಮೇಟಿಯವರ ಅಭಿಮಾನಿಗಳು, ಸ್ನೇಹಿತರಿಗೆ ಹಾಗೂ ಅವರ ಕುಟುಂಬದವರಿಗೆ ಅವರ ಸಾವಿನಿಂದಾಗಿರುವ ದುಖ:ವನ್ನು ಭರಿಸುವ ಶಕ್ತಿಯನ್ನು ಕೊಡಲಿ, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading