Sunday, September 20, 2026
spot_img
More
    spot_img
    HomeLatest newsಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ; ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಾಲ ಸೌಲಭ್ಯ

    ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ; ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಾಲ ಸೌಲಭ್ಯ

    ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಇದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆಯಾಗುತ್ತಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

    Advertisement

    ಬೆಂಗಳೂರು ನಗರದ ಕಂಠೀರವ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ಐ.ಸಿ.ಡಿ.ಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕಾ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

    ಸಚಿವರು ಮಾತನಾಡಿ, “ನವೆಂಬರ್ 19 ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನವಾಗಿದ್ದು, ಇಡೀ ದೇಶವೇ ನಮ್ಮ ಕಡೆಗೆ ತಿರುಗಿ ನೋಡುವಂತ ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದೇವೆ. ಆದಕಾರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದ್ದಾರೆ.

    ಗೃಹಲಕ್ಷ್ಮಿ ಬ್ಯಾಂಕ್, ಸಾಲ ಸೌಲಭ್ಯ: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆಯಡಿ ಬಿಪಿಎಲ್, ಎಪಿಎಲ್ ಅಂತ್ಯೋದಯ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ಡಿಬಿಟಿ ಮೂಲಕ ನೀಡಲಾಗುತ್ತದೆ.

    ಈಗ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಗೃಹಲಕ್ಷ್ಮಿ ಬ್ಯಾಂಕ್ ತೆರೆಯಲಾಗುತ್ತಿದೆ. ಈ ಬ್ಯಾಂಕ್ ಮೂಲಕ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಲ ಸೌಲಭ್ಯದ ಕುರಿತು ಮಾತನಾಡಿದ್ದಾರೆ, “ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಸೊಸೈಟಿಗಳ ಮೂಲಕ 3 ಲಕ್ಷದ ತನಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು” ಎಂದು ಹೇಳಿದ್ದಾರೆ.

    “ವಿಶ್ವದ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದ ಸೊಸೈಟಿ ಜನಮನ್ನಣೆಗಳಿಸಬೇಕು, ಇದಕ್ಕಾಗಿ ಅಧಿಕಾರಿಗಳು ಶ್ರಮ ಪಡಬೇಕು” ಎಂದು ಸಚಿವರು ಸೂಚಿಸಿದರು.

    “ಸೊಸೈಟಿಯು 2000 ಫಲಾನುಭವಿಗಳಿಂದ ಹಣ ಸಂಗ್ರಹ ಮಾಡಿದೆ. ಯಾವುದೇ ಹೊರಗಿನ ಹಣವನ್ನು ಪಡೆಯದೇ ಕೇವಲ ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಪಡೆಯಲಾಗಿದೆ. ಮೂರು ತಿಂಗಳಿನಲ್ಲಿ ಯೋಜನೆಯನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಣೆ ಮಾಡಲಾಗುತ್ತದೆ” ಎಂದರು.

    ಕೆಲವು ದಿನಗಳ ಹಿಂದೆ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ ಸ್ಥಾಪನೆ ಮಾಡಲು ಗೃಹಲಕ್ಷ್ಮಿ ಫಲಾನುಭವಿಗಳ ಮೂಲಕವೇ ಸಂಘ ನಡೆಸುವ ಕುರಿತು ಸಂಘಗಳ (ವಸತಿ ಮತ್ತು ಇತರೆ) ಅಪರ ನಿಬಂಧಕರು ಆದೇಶಗಳನ್ನು ಹೊರಡಿಸಿದ್ದರು.

    ಸಂಘ ಸ್ಥಾಪನೆಗಾಗಿ 21 ಗೃಹಲಕ್ಷ್ಮಿ ಫಲಾನುಭವಿಗಳನ್ನು ಪ್ರವರ್ತಕರು ಎಂದು ಪರಿಗಣಿಸಿ ಸಭೆ ನಡೆಸಿದ್ದು ನೋಂದಣಿಗೂ ಮೊದಲು ಷೇರುದಾರರಿಂದ ಷೇರು ಮೌಲ್ಯ ಸಂಗ್ರಹಿಸಿ, ಅಪೆಕ್ಸ್ ಬ್ಯಾಂಕ್‌ನಲ್ಲಿ ಜಮೆ ಮಾಡಲು ಸಹಕಾರ ಇಲಾಖೆ ಅನುಮೋದಿಸಿತ್ತು.

    ಕೊಡಗು ಜಿಲ್ಲೆಯಿಂದ 50 ಫಲಾನುಭವಿಗಳು ಹಾಗೂ ಉಳಿದ ಎಲ್ಲ ಜಿಲ್ಲೆಗಳ ತಲಾ 65 ಫಲಾನುಭವಿಗಳಿಂದ 1 ಸಾವಿರ ರೂ. ಷೇರು ಮೌಲ್ಯ, 100 ರೂ. ಷೇರು ಶುಲ್ಕ, 100 ರೂ. ಪ್ರವೇಶ ಶುಲ್ಕ ಹಾಗೂ 50 ರೂ. ಅರ್ಜಿ ಶುಲ್ಕ ಸೇರಿ ಒಟ್ಟು1250 ರೂ. ಸಂಗ್ರಹಿಸಲಾಗುತ್ತದೆ. ನಿಗದಿತ ಅರ್ಜಿ ನಮೂನೆಯಲ್ಲಿ ಹೆಸರು, ವಾಸದ ವಿಳಾಸ, ಆಧಾರ್, ಪ್ಯಾನ್ ಸೇರಿದಂತೆ ಇತರ ಮಾಹಿತಿ ನಮೂದಿಸಬೇಕು ಎಂದು ಸೂಚಿಸಲಾಗಿತ್ತು.

    ಬೆಂಗಳೂರಿನ ಕೃಷಿ ಭವನದಲ್ಲಿರುವ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ ಆವರಣದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು ಸೀಮಿತಗೊಳಿಸಲಾಗಿದೆ.

    ಸದ್ಯ ಸದಸ್ಯರಿಂದ ಸಂಗ್ರಹಿಸಿದ ಷೇರು ಹಣವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಖಾತೆ ತೆರೆದು ಠೇವಣಿ ಮಾಡಬೇಕು. ಆ ಬಗ್ಗೆ ದೃಢೀಕರಣ ಪಡೆದು, ಚಲನ್‌ಗಳ ಸಮೇತ ಆನ್‌ಲೈನ್ ಮೂಲಕ ಸೇವಾ ಸಿಂಧು ತಂತ್ರಾಂಶದಲ್ಲಿ ಸಂಘದ ನೋಂದಣಿಗೆ ಪ್ರಸ್ತಾವನೆ ಸಲ್ಲಿಸಬೇಕು. ತಿದ್ದುಪಡಿಯಾದ ಸಹಕಾರ ಸಂಘಗಳ ಅಧಿನಿಯಮ ಮತ್ತು ಸಹಕಾರ ಸಂಘಗಳ ನಿಯಮ ಇವುಗಳನ್ನು ಉಪನಿಯಮದಲ್ಲಿ ಅಳವಡಿಸಿಕೊಂಡ ನಂತರ ನೋಂದಣಿಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

    ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿಗಳನ್ನು 2025-26ರ ಸಾಲಿನ ವರ್ಷಕ್ಕೆ ಮೀಸಲಿರಿಸಲಾಗಿದೆ ಎಂದು ಹೇಳಿದ್ದರು.

    ಬಜೆಟ್‌ನಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ, ಅಕ್ಕ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು. ರಾಜ್ಯಾದ್ಯಂತ ಅಕ್ಕ ಕೋ ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಅಕ್ಕ ಸಹಕಾರಿ ಸಂಘಗಳ ಅಡಿ ತರಲಾಗುತ್ತದೆ ಎಂದು ಭಾಷಣದಲ್ಲಿ ತಿಳಿಸಿದ್ದರು.

    ಈ ಸಂಘದ ಮೂಲಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸಾಲ ಪಡೆಯಲು ಬೇಕಾದ ಅರ್ಹತೆ, ದಾಖಲೆಗಳ ಕುರಿತು ಶೀಘ್ರದಲ್ಲಿಯೇ ಆದೇಶಗಳನ್ನು ಹೊರಡಿಸಲಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading