ಕಾರವಾರ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಬಾವುಟ ಹಾರಿಸಿ ಸಂಭ್ರಮಿಸುವುದು ಕರ್ನಾಟಕದಲ್ಲಿ ಸರ್ವೇಸಾಮಾನ್ಯ. ರಾಷ್ಟ್ರಧ್ವಜವನ್ನು ಹೇಗೆ ಗೌರವಿಸುತ್ತಾರೋ ಅದೇ ರೀತಿ ಕನ್ನಡಿಗರು ತಮ್ಮ ರಾಜ್ಯದ ಧ್ವಜವನ್ನೂ ಸಹ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ. ರಾಜ್ಯೋತ್ಸವದಂದು ಕಚೇರಿಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸಿ ತಮ್ಮ ಅಭಿಮಾನವನ್ನು ಹೊರಹಾಕುತ್ತಾರೆ.
ಆದರೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಹಿಳೆಯೋರ್ವಳು ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಧ್ವಜ ಹಾಕಲು ಹೋದಾಗ ಸೊಕ್ಕಿನಿಂದ ಇಲ್ಲಿ ಹಾಕಬೇಡ ಎಂದು ಕನ್ನಡಿಗರಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಸಂಜೆವಾಣಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದು ನನ್ನ ಏರಿಯಾ ಇಲ್ಲಿ ಹಾಕಬೇಡ ಎಂದು ಮಹಿಳೆ ಕಿಡಿಕಾರಿದ್ದಾಳೆ.
ಈ ಹಿಂದೆಯೂ ಒಬ್ಬನಿಗೆ ಬೈದು ಕಳುಹಿಸಿದ್ದೆ, ನಿನಗೂ ಹೇಳುತ್ತಿದ್ದೇನೆ ಇಲ್ಲಿ ಹಾಕಬೇಡ ಎಂದು ಹೇಳಿದ್ದಾಳೆ. ಇತ್ತ ಕನ್ನಡ ಬಾವುಟ ಹಾಕಲು ಹೋಗಿದ್ದ ವ್ಯಕ್ತಿ ಜಾಗದ ಮಾಲೀಕರ ಬಳಿ ಮಾತನಾಡಿ ಆಗಿದೆ ಎಂದು ಹೇಳಿದರೂ ಸಹ ಕೇಳದ ಆಕೆ ಯಾವುದೇ ಕಾರಣಕ್ಕೂ ಇಲ್ಲಿ ಮಾತ್ರ ಕನ್ನಡ ಬಾವುಟ ಹಾಕಬೇಡ, ಬೇರೆ ಎಲ್ಲಾದರೂ ಹಾಕು ಎಂದು ಹೇಳಿದ್ದಾಳೆ.
ಇನ್ನು ಆಕೆಯ ಮಾತಿನಲ್ಲಿ ಕನ್ನಡತನದ ವಿರೋಧಿ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತಿದ್ದು, ಕನ್ನಡ ಧ್ವಜದ ವಿರುದ್ಧ ಇರುವ ದ್ವೇಷ ಎದ್ದು ಕಾಣುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಬಾವುಟ ಹಾಕಬೇಡ ಎಂದು ಹೇಳಲು ಇವಳಿಗೆ ಹಕ್ಕೇನು ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಬೇರೆಯವರ ಜಾಗದಲ್ಲಿ ಬಾಡಿಗೆಗೆ ಇರುವ ಈಕೆ ಈ ಜಾಗದಲ್ಲೆಲ್ಲೂ ಕನ್ನಡ ಬಾವುಟ ಹಾಕಲು ಬಿಡುವುದಿಲ್ಲ ಎಂದು ಹೇಳಿದ್ದನ್ನು ಕಂಡು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


