ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಶುಕ್ರವಾರ ವಿಧಾನಸೌಧದ ಸಭಾಂಗಣದಲ್ಲಿ ಸರಣಿ ಸಭೆಗಳು ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಎರಡು ಬಾರಿ ಸಭೆಯನ್ನು ನಡೆಸಿದರು.
ಪ್ರತಿ ಟನ್‌ಗೆ 3,550 ರೂ. ಬೆಲೆ ನಿಗದಿಪಡಿಸಬೇಕೆಂಬುದು ರೈತರ ಆಗ್ರಹವಾಗಿತ್ತು. ಆದರೆ ಕಾರ್ಖಾನೆ ಮಾಲೀಕರು ಇದಕ್ಕೆ ಒಪ್ಪಿಗೆ ನೀಡದ ಕಾರಣ ರೈತರ ಹೋರಾಟ ತೀವ್ರಗೊಂಡಿತ್ತು. ಅಂತಿಮವಾಗಿ ಶುಕ್ರವಾರ ಸಂಜೆ ಸರ್ಕಾರ ತನ್ನ ತೀರ್ಮಾನ ಪ್ರಕಟಿಸಿದೆ.
ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಎರಡು ಬಾರಿ ಸಭೆಯನ್ನು ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಕೇಂದ್ರ ಸರ್ಕಾರವು ನಮಗೆ ಸಹಕಾರ ನೀಡಬೇಕು ಎಂದು ಹೇಳಿದ ಅವರು, ಸಭೆಯ ವಿವರಗಳನ್ನು ನೀಡಿದರು.
“ನಾವು ನಾಡಿನ ರೈತರ ಹಿತವನ್ನೇ ಮುಖ್ಯವಾಗಿಸಿಕೊಂಡು ದೃಢ ನಿರ್ಧಾರಕ್ಕೆ ಬಂದಿದ್ದೇವೆ. ಪ್ರತಿ ಟನ್ ಕಬ್ಬಿಗೆ ₹3,300 ಕೊಡಲು ನಿರ್ಧರಿಸಿದೆ. ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ ₹50 ಸೇರಿಸಿ ರೈತರಿಗೆ ಟನ್ ಗೆ ₹3,300 ಕೊಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ 11 ಸಹಕಾರಿ ಕಾರ್ಖಾನೆಗಳು, ಒಂದು ಕಾರ್ಖಾನೆ ಮಾತ್ರ ಸರ್ಕಾರಿ ಸೌಮ್ಯದ್ದು. ಉಳಿದವೆಲ್ಲಾ ಖಾಸಗಿ ಸಕ್ಕರೆ ಕಾರ್ಖಾನೆಗಳಾಗಿವೆ” ಎಂದರು.
ಸಭೆಯ ವಿವರಗಳು
- ಸಭೆಯಲ್ಲಿ ಕರ್ನಾಟಕ ಸರ್ಕಾರ ಪ್ರತಿ ಟನ್ ಕಬ್ಬಿಗೆ 3,300 ರೂ. ನ್ಯಾಯಯುತ ಮತ್ತು ಲಾಭದಾಯಕ ದರವನ್ನು ನಿಗದಿ ಮಾಡಿದೆ. ರೈತರು ಪ್ರತಿಭಟನೆಯನ್ನು ಕೈ ಬಿಡಲು ಮನವಿ ಮಾಡಲಾಗಿದೆ.
- 3,300 ರೂ.ನಲ್ಲಿ ರಾಜ್ಯ ಸರ್ಕಾರ 50 ರೂ. ನೀಡುವುದಾಗಿ ಹೇಳಿದ ನಂತರ ಸಕ್ಕರೆ ಕಾರ್ಖನೆ ಮಾಲೀಕರು ಪಟ್ಟು ಸಡಿಲಿಸಿ ಒಪ್ಪಿಕೊಂಡಿದ್ದಾರೆ. ಪ್ರತಿ ಟನ್ ಕಬ್ಬಿನ 3,300 ರೂ.ನಲ್ಲಿ ಕಾರ್ಖಾನೆಗಳು 3,250 ರೂ. ನೀಡಬೇಕಾಗುತ್ತದೆ. ಸರ್ಕಾರ ಸಹಾಯಧನವಾಗಿ 50 ರೂ. ನೀಡಲಿದೆ.
- ಈಗ ಕಾರ್ಖಾನೆಗಳು 3,200 ರೂ. ಅನ್ನು ಒಂದೇ ಕಂತಿನಲ್ಲಿ ಕೊಡಬೇಕು. ಉಳಿದ 50 ರೂ. 6 ತಿಂಗಳ ನಂತರ ಕಾರ್ಖಾನೆಗಳು ಕೊಡಬೇಕು. 50 ರೂ. ಸಹಾಯಧನ ರಾಜ್ಯ ಸರ್ಕಾರ ನೀಡಲಿದೆ.
- ಸರ್ಕಾರದ ನಿರ್ಧಾರಕ್ಕೆ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದ ಕಬ್ಬು ಬೆಳೆಗಾರರು ಒಪ್ಪಿಗೆ ಕೊಟ್ಟಿದ್ದಾರೆ. ಪ್ರತಿಭಟನೆಯನ್ನು ಅಂತ್ಯಗೊಳಿಸಲಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, “ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಪರಿಹರಿಸಬೇಕಾದ ಸಮಸ್ಯೆಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೆ ಹೇಗೆ?, ರೈತರು ಕೇಂದ್ರದ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಯಬೇಕು” ಎಂದರು.
“ಸಕ್ಕರೆಗೆ ಎಂಎಸ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್ಆರ್‌ಪಿ ನಿಗದಿಪಡಿಸುವವರು ಕೂಡ ಅವರೇ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರವೇ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ ಎಂದು ನೀವೇ ಹೇಳುತ್ತಿದ್ದೀರಿ, ಅವರಿಂದ ಆಗಿರುವ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೇಳಿದರೆ ಹೇಗೆ?” ಎಂದು ಪ್ರಶ್ನೆ ಮಾಡಿದರು.
“ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್‌ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ನೀವೆಲ್ಲಾ ಮನವಿ ಮಾಡಿದ್ದೀರಿ. ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಸಿದ್ದರಾಮಯ್ಯ ಭರವಸೆ ಕೊಟ್ಟರು.
ಸಭೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿಯೋಗ ತೆಗೆದುಕೊಂಡು ಹೋಗಲು ಸಹ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು. ನಿಯೋಗ ಪ್ರಧಾನಿ ನರೇಂದ್ರ ಮೋದಿ ಅಥವ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರ ಮತ್ತು ರೈತರ ಅಹವಾಲುಗಳನ್ನು ಸಲ್ಲಿಕೆ ಮಾಡಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಬೆಳಗ್ಗೆ ನಡೆಸಿದ ಸಭೆಯಲ್ಲಿ ಮಾಲೀಕರು ಯಾವ ಬೇಡಿಕೆಗೂ ಒಪ್ಪಿರಲಿಲ್ಲ. ಆದ್ದರಿಂದ ವಿಧಾನಸೌಧದಲ್ಲಿಯೇ ಮಾಲೀಕರು ಮತ್ತೊಂದು ಸಭೆ ನಡೆಸಿದರು. ಬಳಿಕ ಮುಖ್ಯಮಂತ್ರಿಗಳು, ಸಚಿವರ ಜೊತೆ ಅಂತಿಮ ಸಭೆ ನಡೆಸಿದಾಗ ಸರ್ಕಾರದ ಬೇಡಿಕೆಗೆ ಒಪ್ಪಿದರು.
ಕಬ್ಬಿಗೆ ಯೋಗ್ಯ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಆಹೋರಾತ್ರಿ ಹೋರಾಟದಲ್ಲಿ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿತ್ತು. ಬೆಳಗಾವಿಯಿಂದ ರೈತರ ಹೋರಾಟ ಬಾಗಲಕೋಟೆ, ವಿಜಯಪುರ ಜಿಲ್ಲೆಗೂ ವಿಸ್ತರಣೆಯಾಗಿತ್ತು. ಶುಕ್ರವಾರ ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ತೀವ್ರಗೊಳಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


