Zee ಕನ್ನಡ ಕರ್ನಾಟಕದಲ್ಲಿ ಕನ್ನಡಿಗರ ಮನೆ-ಮನ ತುಂಬಿರುವ ಮನೋರಂಜನಾ ಚಾನಲ್. ಇದರಲ್ಲಿ ಪ್ರಸಾರವಾಗುವ ಧಾರವಾಹಿಗಳು, ರಿಯಾಲಿಟಿ ಶೋಗಳಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ Zee ಕನ್ನಡ ಈಗ ಕನ್ನಡಿಗರ ಕ್ಷಮೆ ಕೇಳಿದೆ. ಕ್ಷಮಾಪಣ ಪತ್ರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ.
ವಿವಿಧ ಧಾರವಾಹಿ, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ, ಸರಿಗಮಪ ಮುಂತಾದ ರಿಯಾಲಿಟಿ ಶೋಗಳ ಮೂಲಕ ಜನರ ಮೆಚ್ಚುಗೆ ಪಡೆದಿರುವ ಮನರಂಜನಾ ಚಾನಲ್ ಮಾಡಿರುವುದು ಏನು?. ಅದರಲ್ಲು ನವೆಂಬರ್ ತಿಂಗಳಿನಲ್ಲಿ ಕನ್ನಡಿಗರ ಕ್ಷಮೆ ಕೇಳಿದ್ದು ಏಕೆ? ಎಂದು ಚರ್ಚೆಗಳು ನಡೆಯುತ್ತಿವೆ.
ಪತ್ರದ ವಿವರ: ಕ್ಷಮಾಪಣಾ ಪತ್ರ…
ವೈವಿಧ್ಯಮಯ, ವಿಶೇಷ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಿಮ್ಮ ಹೆಮ್ಮೆಯ ಜೀ ಕನ್ನಡ ಚಾನಲ್ ನಮ್ಮೆಲ್ಲರ ಮನಗೆದ್ದಿರುವುದು ಗೊತ್ತೇ ಇದೆ.
ನಿಮ್ಮ ಪ್ರಶಂಸೆಯ ಜೊತೆಗೆ ಜೀ ಕನ್ನಡ ಚಾನಲ್ ಶುರುವಾದ ನಂತರ ಮನೋರಂಜನೆಯಲ್ಲೇ ಮುಳುಗುವ ನಾವು ರಿಮೋಟ್‌ನೇ ಮರೆತು ಬಿಡುತ್ತೀವಿ, ಚಾನಲ್ ಬದಲಾಯಿಸುವುದೇ ಇಲ್ಲ ಎನ್ನುವ ಪ್ರೀತಿಯ ಆರೋಪ ಕೇಳಿಬಂದಿದೆ.
ನಮ್ಮ ಅದ್ಭುತ ಮನರಂಜನಾ ಕಾರ್ಯಕ್ರಮಗಳ ಮೂಲಕ ನಿಮಗೆ ಬೇರೆ ಚಾನಲ್ ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ.
ನಿಮ್ಮ ಕ್ಷಮೆಯ ಜೊತೆಜೊತೆಗೇ ನಿಮ್ಮ ಪ್ರೀತಿಯ ಆರೋಪವನ್ನು ನಾವು ಇನ್ನೂ ಹೆಚ್ಚು ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತೇವೆ.
ಧನ್ಯವಾದಗಳು
ಇಂತಿ ನಿಮ್ಮ ಜೀ ಕನ್ನಡ ಎಂದು ಪತ್ರದಲ್ಲಿ ಬರೆಯಲಾಗಿದೆ.

Zee ಕನ್ನಡ ಕ್ಷಮೆ ಕೇಳಿದ್ದು ಏಕೆ?, ಯಾವ ಕಾರ್ಯಕ್ರಮದಲ್ಲಿ ತಪ್ಪಾಗಿದೆ? ಎಂದು ಕನ್ನಡಿಗರು ತಲೆಕೆಡಿಸಿಕೊಂಡಿದ್ದಾರೆ. ಆದರೆ ಇಲ್ಲಿರುವ ವಾಸ್ತವ ಬೇರೆ. ಇದಕ್ಕೆಲ್ಲ ಕಾರಣ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ “Sorry Strategy” ಇದು ಈಗ ವೈರಲ್ ಆಗಿದೆ.
ಸಾಮಾನ್ಯವಾಗಿ ಕಾರ್ಪೊರೇಟ್ ಶೈಲಿಯ ಗಂಭೀರ ಭಾಷೆಗಳಿಂದ ದೂರವಾಗಿ, ಇದೀಗ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಹಾಸ್ಯವನ್ನು ಅಳವಡಿಸಿಕೊಳ್ಳುತ್ತಿವೆ.
ಇದು ಸೋಶಿಯಲ್ ಮೀಡಿಯಾದಲ್ಲಿ ಈಗ ಹೊಸ ಸಂಚಲನ ಸೃಷ್ಟಿಸಿದೆ. ತಮ್ಮ ಆಫಿಷಿಯಲ್ ಅಪಾಲಜಿ ಟ್ರೆಂಡ್ ಅಂದರೆ ಕಂಪನಿಗಳು ತಮ್ಮ ಕೆಲಸದಲ್ಲಿ ಅತಿಯಾಗಿ ಉತ್ತಮವಾಗಿರುವುದಕ್ಕಾಗಿ ಹಾಸ್ಯಾಸ್ಪದವಾಗಿ ಕ್ಷಮೆ ಕೇಳುತ್ತಿರುವ ಟ್ರೆಂಡ್ ವೈರಲ್ ಆಗಿದ್ದು, ಜೀ ಕನ್ನಡವು ಇದನ್ನು ಅನುಸರಿಸಿದೆ.
ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮನ್ನೇ ಹಾಸ್ಯ ಮಾಡುವ ಶೈಲಿಯಲ್ಲಿ ಜನರ ಮನ ಗೆದ್ದಿದ್ದು, ಪ್ರೇಕ್ಷಕರು ಈ ಹೊಸ ಪ್ರಯೋಗವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದನ್ನು ಕನ್ನಡಿಗರ ಮೇಲೆ ಸಹ ಜೀ ಕನ್ನಡ ಕ್ಷಮಾಪಣೆ ಪತ್ರದ ರೂಪದಲ್ಲಿ ಪ್ರಕಟಿಸಿದೆ.
ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿಗಳಾದ ವೋಕ್ಸ್ ವ್ಯಾಗನ್, ಸ್ಕೋಡಾ ಇಂಡಿಯಾ, ಟಿ-ಸೀರೀಸ್ ಮತ್ತು ಕೆವೆಂಟರ್ಸ್ ಸೇರಿದಂತೆ ಹಲವಾರು ಪ್ರಸಿದ್ಧ ಬ್ರ್ಯಾಂಡ್‌ಗಳು ಈಗಾಗಲೇ ತಮ್ಮ ಸೃಜನಾತ್ಮಕ ಕ್ಷಮಾಪಣಾ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿವೆ. ಜೀ ಕನ್ನಡವೂ ಈ ಅಭಿಯಾನದಲ್ಲಿ ಪಾಲ್ಗೊಂಡಿದೆ.
ಈ ‘ಆಫಿಷಿಯಲ್ ಅಪಾಲಜಿ ಟ್ರೆಂಡ್’ ಸದ್ಯದ ಒಂದು ಚತುರವಾದ ಮಾರ್ಕೆಟಿಂಗ್ ತಂತ್ರವಾಗಿ ಕೆಲಸ ಮಾಡುತ್ತಿದೆ. ಬ್ರ್ಯಾಂಡ್‌ಗಳಿಗೆ ಮಾನವೀಯ ಸ್ಪರ್ಶ ನೀಡುತ್ತಾ, ಪ್ರೇಕ್ಷಕರೊಂದಿಗೆ ನಿಜವಾದ ಸಂಪರ್ಕವನ್ನು ಬೆಳೆಸುತ್ತಾ, ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚಿನ ಗಮನ ಸೆಳೆಯುವ ವಿಷಯವನ್ನು ಇದು ಒದಗಿಸುತ್ತಿದೆ.
ಈ ಕ್ಷಮೆಯ ಶೈಲಿ ಮತ್ತು ಅದರ ಪ್ರಸ್ತುತಿ ಎಲ್ಲರ ಗಮನ ಸೆಳೆದು, ಬ್ರ್ಯಾಂಡ್‌ನತ್ತ ಆಕರ್ಷಣೆಯನ್ನು ಮೂಡಿಸುತ್ತಿದೆ.
ಸಾಮಾಜಿಕ ಜಾಲತಾಣವೇ ಹಾಗೆ ಅಲ್ಲಿ ಯಾವ ವಿಚಾರ, ಏಕೆ ಟ್ರೆಂಡ್ ಆಗುತ್ತದೆ? ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಯಾರಿಗೂ ಗೊತ್ತಿರದ ವ್ಯಕ್ತಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾನೆ. ಈಗ ಹಾಗೆಯೇ “Sorry Strategy” ವೈರಲ್ ಆಗಿದೆ. ಇನ್ನೊಂದು ಹೊಸ ಟ್ರೆಂಡ್ ಬರುವ ತನಕ ಇದನ್ನು ಎಲ್ಲೂ ಫಾಲೋ ಮಾಡುತ್ತಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


