ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯ 21 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಪ್ರಮುಖ ಮೂರು ರೈಲ್ವೆ ಯೋಜನೆಗಳ ಕುರಿತು ಅವರು ಅಪ್‌ಡೇಟ್ ನೀಡಿದ್ದಾರೆ.
ಸಚಿವ ವಿ. ಸೋಮಣ್ಣ ಕಾರವಾರ ರೈಲು ನಿಲ್ದಾಣದಿಂದ ಮಡಗಾಂವ್ ತನಕ ರೈಲಿನಲ್ಲಿ ಸಂಚಾರವನ್ನು ನಡೆಸಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆ ಹಾಗೂ ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆಗಳನ್ನು ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಸುಮಾರು 21 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿ ನಡೆಯುತ್ತಿವೆ ಎಂದು ವಿ. ಸೋಮಣ್ಣ ಹೇಳಿದರು.
ತಾಳಗುಪ್ಪ-ಹುಬ್ಬಳ್ಳಿ ಮಾರ್ಗ: ಮಲೆನಾಡು ಮತ್ತು ಬಯಲುಸೀಮೆ ಜೋಡಿಸುವ ಉದ್ದೇಶದಿಂದ ತಾಳಗುಪ್ಪ-ಶಿರಸಿ-ಹುಬ್ಬಳಿ 158 ಕಿ.ಮೀ. ಉದ್ದದ ಹೊಸ ಮಾರ್ಗವು ರೈಲ್ವೆ ಮಂಡಳಿಯಲ್ಲಿ ಅನುಮೋದನೆಯಾಗಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆಯಾಗಬೇಕಿದೆ.
ಈ ಯೋಜನೆ ಮತ್ತು ತಾಳಗುಪ್ಪ ಹೊನ್ನಾವರ ಹೊಸ ಮಾರ್ಗಕ್ಕೆ ಒಟ್ಟು ಸುಮಾರು 21 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಮುರ್ಡೇಶ್ವರ, ಗೋಕರ್ಣ ಮತ್ತು ಹೊನ್ನಾವರ ರೈಲ್ವೆ ನಿಲ್ದಾಣಗಳ ಆಧುನೀಕರಣ ಕಾಮಗಾರಿ ಪ್ರಾರಂಭವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ತಾಳಗುಪ್ಪ ಶಿವಮೊಗ್ಗ ಜಿಲ್ಲೆಯ ಕೊನೆಯ ರೈಲು ನಿಲ್ದಾಣವಾಗಿದೆ. ಬೆಂಗಳೂರು, ಮೈಸೂರು ನಗರದಕ್ಕೆ ತಾಳಗುಪ್ಪದಿಂದ ರೈಲು ಸಂಪರ್ಕವಿದೆ. ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿಗೆ ನೂತನ ರೈಲು ಮಾರ್ಗ ನಿರ್ಮಾಣ ಮಾಡುವುದು ಯೋಜನೆಯಾಗಿದೆ. ಇದರಿಂದಾಗಿ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಬ್ಬಳ್ಳಿ- ಅಂಕೋಲಾ ನಡುವಿನ 164 ಕಿ.ಮೀ. ಉದ್ದದ ನೂತನ ಯೋಜನೆಯನ್ನು 16,500 ಕೋಟಿ ವೆಚ್ಚದಲ್ಲಿ ರೈಲ್ವೆ ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಸರ್ವೇ, ಡಿಪಿಆರ್, ಫಾರೆಸಟ್ ಕ್ಲಿಯರೆನ್ಸ್ ಕೂಡ ಮುಕ್ತಾಯಗೊಂಡಿದ್ದು, ವನ್ಯಜೀವಿ ಕ್ಲಿಯರೆನ್ಸ್ ಬಾಕಿ ಇದೆ ಎಂದು ಸಚಿವರು ವಿವರಣೆ ನೀಡಿದರು.
ಇನ್ನು 5-6 ತಿಂಗಳಿನೊಳಗೆ ಈ ಯೋಜನೆಗೆ ಎಲ್ಲಾ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವಾಗುವುದಿಲ್ಲ, ಸುಮಾರು 1997-98 ರಲ್ಲಿ ಆರಂಭಿಸಿದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಲಘಟಗಿವರೆಗೆ ಪೂರ್ಣಗೊಂಡಿದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಿಂದ ಪಶ್ಚಿಮ ಘಟ್ಟದ ಕಾಡುಗಳಿಗೆ ಹಾನಿಯಾಗಲಿದೆ ಎಂಬ ಕಾರಣಕ್ಕೆ ಪರಿಸರವಾದಿಗಳು ಯೋಜನೆ ವಿರೋಧಿಸುತ್ತಿದ್ದಾರೆ. ಈಗ ರೈಲು ಮಾರ್ಗವ ವಿನ್ಯಾಸವನ್ನು ಬದಲಾವಣೆ ಮಾಡಿ ಹೊಸ ಡಿಪಿಆರ್ ತಯಾರು ಮಾಡಲಾಗಿದೆ. ಕೆಲವು ಕಾರಣಗಳಿಂದ ಯೋಜನೆ ನಿಂತುಹೊಗಿದ್ದು, ಈ ಯೋಜನೆಗೆ 2,5030 ಎಕರೆ ಜಾಗ ಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೊಂಕಣ ರೈಲ್ವೆ ವಿಲೀನ: ಭಾರತೀಯ ರೈಲ್ವೆಯ ಜೊತೆಗೆ ಕೊಂಕಣ ರೈಲ್ವೆ ವಿಲೀನದ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕದ ಕರಾವಳಿ ಕೊಂಕಣ ರೈಲ್ವೆ ವ್ಯಾಪ್ತಿಗೂ ಒಳಪಡುತ್ತದೆ. ಕೊಂಕಣ ರೈಲ್ವೆ ವಿಲೀನ ಕುರಿತು ಕೇಂದ್ರ ಸರ್ಕಾರ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹ ಮಾಡಿದೆ.
ಈ ವಿಲೀನ ಪ್ರಕ್ರಿಯೆಯ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ ವಿಲೀನ ಪ್ರಕ್ರಿಯೆ ಚರ್ಚೆಯ ಹಂತದಲ್ಲಿದ್ದು, ಅವುಗಳ ಆಗುಹೋಗಗಳ ಬಗ್ಗೆ ಚರ್ಚಿಸಲಾಗುತ್ತಿದೆ. ರೈಲ್ವೆಯ ಬಹುತೇಕ ರೈಲು ನಿಲ್ದಾಣಗಳು ಆಧುನೀಕರಣಗೊಳ್ಳುತ್ತಿದ್ದು, ಕೊಂಕಣ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


