ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ಸದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ್ದು, ಪವರ್‌ಪ್ಲೇನಲ್ಲಿ ಅಬ್ಬರದ ಆರಂಭ ಪಡೆದುಕೊಂಡು ನಂತರದ ಓವರ್‌ಗಳಲ್ಲಿ ಭಾರತದ ಬೌಲಿಂಗ್ ದಾಳಿ ಮುಂದೆ ಮಂಕಾಗಿದೆ.
50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿರುವ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿದೆ.
ಪವರ್‌ಪ್ಲೇನಲ್ಲಿ ಅಬ್ಬರಿಸಿದ ಬಳಿಕ ವೇಗವಾಗಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಪವರ್‌ಪ್ಲೇನಲ್ಲಿ ಅರ್ಧಶತಕ ದಾಟಿದ್ದ ನ್ಯೂಜಿಲೆಂಡ್‌ಗೆ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ವರುಣ್ ಚಕ್ರವರ್ತಿ ಶಾಕ್ ನೀಡಿದರು. ಇದರ ಬೆನ್ನಲ್ಲೇ ಹನ್ನೊಂದನೇ ಓವರ್ ಎಸೆದ ಕುಲ್‌ದೀಪ್ ಯಾದವ್ ಓವರ್‌ನ ಮೊದಲ ಎಸೆತದಲ್ಲೇ ಅಪಾಯಕಾರಿ ಆಟಗಾರ ರಚಿನ್ ರವೀಂದ್ರ ಅವರ ವಿಕೆಟ್ ಕಬಳಿಸಿದರು.
ಹೀಗೆ ಆರಂಭಿಕ ಆಘಾತ ಅನುಭವಿಸಿದ ನ್ಯೂಜಿಲೆಂಡ್ ತಂಡಕ್ಕೆ ಸುಧಾರಣೆ ತರಲು ಹಲವು ಆಟಗಾರರು ಯತ್ನಿಸಿದರಾದರೂ ಯಾರೂ ಯಶಸ್ವಿಯಾಗಲಿಲ್ಲ.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿಲ್ ಯಂಗ್ 15 ರನ್ ಗಳಿಸಿದರೆ, ರಚಿನ್ ರವೀಂದ್ರ 37 ರನ್ ಗಳಿಸಿದರು. ವಿಲಿಯಮ್ಸನ್ 11 ರನ್, ಜವಾಬ್ದಾರಿಯುತ ಆಟವನ್ನಾಡಿದ ಡೇರಿಲ್ ಮಿಚೆಲ್ 63 ರನ್ ಗಳಿಸಿದರು. ಟಾಮ್ ಲೇಥಮ್ 14 ರನ್ ಬಾರಿಸಿದರೆ, ಗ್ಲೆನ್ ಫಿಲಿಪ್ಸ್ 34 ರನ್, ಮಿಚೆಲ್ ಸ್ನಾಂಟ್ನರ್ 8 ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ತಂಡದ ಕೈ ಹಿಡಿದ ಮಿಚೆಲ್ ಬ್ರೇಸ್‌ವೆಲ್ 40 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 53 ರನ್ ಚಚ್ಚಿದರು. ಯಾವುದೇ ರನ್ ಗಳಿಸಿದ ನೇಥನ್ ಸ್ಮಿತ್ ಅಜೇಯರಾಗಿ ಉಳಿದರು.
ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ತಲಾ ಎರಡೆರಡು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


