Monday, November 2, 2026
spot_img
More
    spot_img
    HomeStateDistrictಬೆಳಗಾವಿ ಸುವರ್ಣಸೌಧದಲ್ಲಿ ಜಗತ್ತಿನ 2ನೇ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ

    ಬೆಳಗಾವಿ ಸುವರ್ಣಸೌಧದಲ್ಲಿ ಜಗತ್ತಿನ 2ನೇ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ

    ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ‌ 8ರ ಸೋಮವಾರ ಅಧಿವೇಶನ ಆರಂಭವಾಗಿದ್ದು, ಡಿಸೆಂಬರ್ 19ರ ತನಕ ನಡೆಯಲಿದೆ. ಈ ಸಂದರ್ಭದಲ್ಲಿ ಜಗತ್ತಿನ 2ನೇ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ ಮಾಡಲಾಗಿದೆ.

    ಮಂಗಳವಾರ ಬೆಳಗಾವಿಯ ಸುವರ್ಣಸೌಧದ ಮುಂಭಾಗ ಜಗತ್ತಿನ 2ನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನಾವರಣಗೊಳಿಸಿದರು.

    ಈ ಕುರಿತು ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಇಂದು ಬೆಳಗಾವಿಯ ಸುವರ್ಣಸೌಧದ ಮುಂಭಾಗ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅತ್ಯಂತ ಸಂತೋಷದಿಂದ ಅನಾವರಣಗೊಳಿಸಿ, ಶುಭ ಹಾರೈಸಿದೆ. ಖಾದಿ ಬಟ್ಟೆಯಿಂದ ತಯಾರಿಸಿದ ಸಾಂಪ್ರದಾಯಿಕ ತ್ರಿವರ್ಣ ಧ್ವಜವನ್ನು ಇಡೀ ದೇಶಕ್ಕೆ ಪೂರೈಸುವ ಕನ್ನಡಿಗರಾದ ನಮಗಿದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

    ಅತಿ ದೊಡ್ಡ ತ್ರಿವರ್ಣ ಧ್ವಜ: – ಬೆಳಗಾವಿ ಸುವರ್ಣಸೌಧದ ಮುಂಭಾಗ ಜಗತ್ತಿನ 2ನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್ ಮತ್ತು ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ,”ಇಂದು ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೂ ಧನ್ಯವಾದಗಳು” ಎಂದರು.

    “ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ರೂಪಿಸಲಾಯಿತು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಕೇಸರಿ ಬಣ್ಣವು ಶಕ್ತಿ, ಸ್ಥೈರ್ಯ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆಯನ್ನು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ” ಎಂದು ಬಣ್ಣಿಸಿದರು.

    “ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ, ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ – ಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕೆಳದ ವರ್ಷ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸುವರ್ಣಸೌಧದ ಪಕ್ಕದಲ್ಲಿ ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.

    “ನಾವೆಲ್ಲರೂ ದೇಶಪ್ರೇಮಿಗಳಾಗಬೇಕು. ದೇಶದಲ್ಲಿ ಅನೇಕ ಜಾತಿ, ಧರ್ಮಗಳಿದ್ದು, ನಾವೆಲ್ಲರೂ ಜಾತ್ಯತೀತರಾಗಬೇಕಾಗಿರುವುದು ಅವಶ್ಯಕ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಜಾತ್ಯತೀತ ರಾಷ್ಟ್ರ ನಿರ್ಮಾಣ ಕಷ್ಟವಾಗುತ್ತದೆ” ಎಂದರು.

    “ಸ್ವಾತಂತ್ರ್ಯ ಬಂದು 79 ವರ್ಷಗಳಾಗಿವೆ. ನಾವೆಷ್ಟರಮಟ್ಟಿಗೆ ಭ್ರಾತೃತ್ವ, ದೇಶಪ್ರೇಮ, ಮನುಷ್ಯ ಸಮಾಜವನ್ನು ಈ ದೇಶದಲ್ಲಿ ಸಾಧಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಿಲ್ಲದೇ ಹೋದರೆ ಮನುಷ್ಯರಾಗಿ ಬಾಳುವುದು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಈ ಮನೋಭಾವ ಬೆಳೆಯಬೇಕು” ಎಂದು ಕರೆ ನೀಡಿದರು.

    “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿಯೇ ಇಂಥ ಐತಿಹಾಸಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರು ಕೊಟ್ಟಿರುವ ರಾಷ್ಟ್ರಧ್ವಜಕ್ಕಾಗಿ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ” ಎಂದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search