ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 10 ) ಸಂಜೆ 7.30ಕ್ಕೆ ಐಪಿಎಲ್ನ 24ನೇ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಲ್ಲ ಮೂರು ಪಂದ್ಯಗಳಲ್ಲಿಯೂ ಗೆದ್ದು ಸೋಲನ್ನೇ ಕಾಣದಿರುವ ಏಕೈಕ ತಂಡ ಎನಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದ್ದರೆ, ಬಲಿಷ್ಟ ತಂಡಗಳನ್ನು ಅವರ ತವರಿನಲ್ಲೇ ಸೋಲಿಸಿ ತವರಿನಲ್ಲಿ ಒಂದು ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋಮ್ ಪಿಚ್ನಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆ ಇದೆ.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ಇತ್ತಂಡಗಳ ಆಟಗಾರರು ಚಿನ್ನಸ್ವಾಮಿ ಅಂಗಳದಲ್ಲಿ ಅಭ್ಯಾಸವನ್ನು ಆರಂಭಿಸಿದ್ದು, ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಲಿಯಾಮ್ ಲಿವಿಂಗ್ಸ್ಟನ್ಗೆ ಡೆಲ್ಲಿ ಕ್ಯಾಪಿಟಲ್ಸ್ನ ಸ್ಪೋಟಕ ಆಟಗಾರ ಅಶುತೋಷ್ ಶರ್ಮಾ ಸಿಕ್ಸರ್ ಬಾರಿಸುವ ಎಚ್ಚರಿಕೆ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಈ ವಿಡಿಯೊವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ರೆಂಡ್ಲಿ ಫೈಯರ್ ಮೂಡ್ ಎಂದು ಬರೆದುಕೊಂಡಿದೆ. ಈ ವಿಡಿಯೊದಲ್ಲಿ ಅಶುತೋಶ್ ಶರ್ಮಾಗೆ ಲಿವಿಂಗ್ಸ್ಟನ್ ಗುಡ್ ಲಕ್ ಎಂದು ಶುಭ ಕೋರಿದ್ದು, ಇದಕ್ಕೆ ಪ್ರತಿಯಾಗಿ ಅಶುತೋಶ್ ನಾಳೆ ನೀನು ಬೌಲಿಂಗ್ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಹಾಕಿದ್ದಾರೆ. ಲಿವಿಂಗ್ಸ್ಟನ್ ಮಾಡುತ್ತೇನೆ ಎಂದುಕೊಂಡಿದ್ದೇನೆ ಎಂದಿದ್ದು, ನಿನಗೆ ಬೌಲ್ ಹಾಕುವುದೆಂದರೆ ನನಗಿಷ್ಟ ಎಂದಿದ್ದಾರೆ. ಅಲ್ಲದೇ ಈಸಿಯಾಗಿ ವಿಕೆಟ್ ತೆಗೆಯುತ್ತೇನೆ ಎಂದು ತಮ್ಮ ಪಾಕೆಟ್ ತೋರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಸಿಕ್ಸರ್ ಬಾರಿಸಿದರೆ ಚೆಂಡು ಇಲ್ಲಿ ಬಂದು ಬೀಳುತ್ತೆ ಎಂದು ಅಶುತೋಶ್ ಕೌಂಟರ್ ನೀಡಿದ್ದಾರೆ. ಇದಕ್ಕೆ ನೋಡೋಣ ಎಂದು ಇಬ್ಬರೂ ಕೈಕುಲುಕುತ್ತಾ ತೆರಳಿದ್ದಾರೆ.
ತಮಾಷೆಗಾಗಿ ಈ ವಿಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ಹಂಚಿಕೊಂಡಿದ್ದು, ಪಂದ್ಯದಲ್ಲಿ ಇಂತಹದ್ದೇ ಸನ್ನಿವೇಶ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


