ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿ ಮತ್ತೆ ಸುದ್ದಿಯಲ್ಲಿದೆ. ಉಗ್ರರು, ಗಲ್ಲು ಶಿಕ್ಷೆಗೆ ಗುರಿಯಾದ ಕೈದಿಗಳು ಮೊಬೈಲ್, ಟಿವಿ ಸೇರಿದಂತೆ ಐಷಾರಾಮಿ ಸವಲತ್ತುಗಳನ್ನು ಪಡೆದಿರುವ ವಿಡಿಯೋ ವೈರಲ್ ಆಗಿದೆ. ಜೈಲಿನ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದರು. ನಾಳೆ ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ” ಎಂದು ಹೇಳಿದರು.
“ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಇಂದು ಸಭೆ: ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಎಡಿಜಿಪಿ ಬಿ. ದಯಾನಂದ ಸೋಮವಾರ ಮಹತ್ವದ ಸಭೆ ಕರೆದಿದ್ದಾರೆ. ಈಗಾಗಲೇ ಅವರು ವಿಡಿಯೋ ಯಾವಾಗ ಚಿತ್ರೀಕರಣ ಮಾಡಿದ್ದು, ಎಲ್ಲಿ ಮಾಡಿದ್ದು, ವೈರಲ್ ಆಗಿದ್ದು ಹೇಗೆ? ಎಂಬ ಕುರಿತು ಅಧಿಕಾರಿಗಳಿಂದ ವರದಿ ಕೇಳಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಜೈಲಿನ ವಿಡಿಯೋ ವೈರಲ್ ಆದ ಬಳಿಕ ಈ ಪ್ರಕರಣ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ‘ದರ್ಶನ್ ರಾಜಾತಿಥ್ಯ’ ಪ್ರಕರಣದ ಬಳಿಕ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ ಜೈಲಿನ ಅಧಿಕಾರಿಗಳ ಕಾರ್ಯ ವೈಖರಿ ಪ್ರಶ್ನೆಗೆ ಕಾರಣವಾಗಿದೆ. ಆದ್ದರಿಂದ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, “ಹಿಂದೆಯೂ ಇಂತಹ ಘಟನೆಗಳು ನಡೆದಾಗ ನಾವು ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದ್ದೇವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಈಗ ಬಿ. ದಯಾನಂದ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರು ರಜೆಯಲ್ಲಿದ್ದರು, ಆದರೆ ನಾನು ಅವರೊಂದಿಗೆ ಮಾತನಾಡಿದ್ದೇನೆ” ಎಂದು ಹೇಳಿದ್ದಾರೆ.
“ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಇಂತಹ ವಿಷಯಗಳನ್ನು ಸಹಿಸಲಾಗುವುದಿಲ್ಲ. ಇದು ಮುಂದುವರಿದರೆ, ಅದನ್ನು ಜೈಲು ಎಂದು ಕರೆಯಲಾಗುವುದಿಲ್ಲ. ನಾನು ಪೊಲೀಸರ ಸಭೆ ಕರೆಯುತ್ತೇನೆ ಮತ್ತು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ವರದಿ ಕೇಳಿದ್ದೇನೆ. ವರದಿ ತೃಪ್ತಿಕರವಾಗಿರದಿದ್ದರೆ ಮತ್ತೊಂದು ಸಮಿತಿ ರಚಿಸುತ್ತೇನೆ. ಪೊಲೀಸರ ವರದಿ ಸ್ಪಷ್ಟತೆ ನೀಡದಿದ್ದರೆ, ಪ್ರತ್ಯೇಕ ತನಿಖೆ ನಡೆಸುತ್ತೇವೆ. ಉಗ್ರನಾಗಲಿ, ಯಾರಾಗಲಿ ಯಾರಿಗೂ ಫೋನ್ ಬಳಸುವ ಅವಕಾಶ ಇರಬಾರದು” ಎಂದರು.
“ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಜೈಲುಗಳಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದಕ್ಕೆ ಕಾರಣವೇನು? ಎಂಬುದರ ಬಗ್ಗೆ ವರದಿ ಕೇಳಿದ್ದೇನೆ. ಈ ವಿಡಿಯೋ ಹಳೆಯದೋ, ಹೊಸದೋ? ಖಚಿತವಾಗಿಲ್ಲ. ಆದರೆ ತನಿಖೆ ನಡೆಯಬೇಕು. ಹಳೆಯದಾದರೂ ಇಂತಹ ಘಟನೆಗಳು ನಡೆಯಬಾರದು. ನಟ ದರ್ಶನ್ ಕೇವಲ ಒಂದು ದಿಂಬಿಗಾಗಿ ನ್ಯಾಯಾಲಯಕ್ಕೆ ಹೋಗಬೇಕಾಯಿತು, ಆದರೆ ಇವರಿಗೆ ಫೋನ್ ಸುಲಭವಾಗಿ ಸಿಗುತ್ತಿದೆ” ಎಂದು ಸಚಿವರು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


