ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ದೊಡ್ಡ ಮಟ್ಟದ ವಿರೋಧವಿದೆ. ನಮ್ಮವರ ಜೊತೆ ಮಾತನಾಡಲು ಮಾತೃಭಾಷೆ ಸಾಕು ಹಾಗೂ ಸಂವಹನಕ್ಕಾಗಿ ಇಂಗ್ಲಿಷ್ ಇದೆ ಎಂಬ ಸಿದ್ಧಾಂತವನ್ನಿಟ್ಟುಕೊಂಡು ಅನೇಕರು ಹಿಂದಿಯನ್ನು ವಿರೋಧಿಸುತ್ತಿದ್ದಾರೆ.
ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತ್ರಿಭಾಷಾ ನೀತಿ ಬೇಡ ಎಂದು ದಕ್ಷಿಣದ ರಾಜ್ಯಗಳು ಕೇಂದ್ರದ ವಿರುದ್ಧ ತಿರುಗಿಬಿದ್ದಿವೆ. ಅದರಲ್ಲೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿ ಎತ್ತಿದ್ದಾರೆ.
ಹೀಗಿರುವಾಗ ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಿಂದಿ ಕಲಿಯಬೇಕು ಎಂದು ಹೇಳಿಕೆ ನೀಡುವ ಮೂಲಕ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಟಾಂಗ್ ನೀಡಿದ್ದಾರೆ.
ಚಂದ್ರಬಾಬು ನಾಯ್ಡು ಅವರಿಗೆ ಪ್ರಶ್ನೆ ಹಾಕುವ ಮುನ್ನ ಸುದ್ದಿ ವಾಚಕ ಎಂಕೆ ಸ್ಟಾಲಿನ್ ಅವರ ಹೆಸರನ್ನು ತೆಗೆದುಕೊಂಡು ತ್ರಿಭಾಷಾ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಉಲ್ಲೇಖಿಸಿ ನಿಮ್ಮ ನಿಲುವು ಏನೆಂದು ಕೇಳಿದರು. ಇದಕ್ಕೆ ಉತ್ತರಿಸಿದ ಚಂದ್ರಬಾಬು ನಾಯ್ಡು ಮೊದಲಿಗೆ ಬ್ರಿಟಿಷರು ಬಿಟ್ಟು ಹೋದ ಇಂಗ್ಲಿಷ್ ಕಲಿತು ಕೆಲಸ ಗಿಟ್ಟಿಸಿಕೊಳ್ಳಲಾಗುತ್ತಿದೆ ಎಂದರು.
ಬಳಿಕ ʼತೆಲಂಗಾಣದ ಹೈದರಾಬಾದ್ ಜನರು ದೆಹಲಿಯಲ್ಲಿ ಹೆಚ್ಚು ಅನುಕೂಲವನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರಿಗೆ ಹಿಂದಿ ಬರುತ್ತದೆ. ಆದರೆ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಜನರಿಗೆ ಹಿಂದಿ ಬಾರದ ಕಾರಣ ಅನನುಕೂಲವಾಗಿದೆ. ನಾವ್ಯಾಕೆ ಕಲಿಯಬಾರದು? ಜನರು ಈಗೀಗ ಕಲಿತುಕೊಳ್ಳುತ್ತಿದ್ದಾರೆ. ಸ್ಥಳೀಯ ಭಾಷೆ ಹಾಗೂ ಮಾತೃ ಭಾಷೆ ಕಡ್ಡಾಯವಾಗಿ ಕಲಿಯಬೇಕು ಅದರಲ್ಲಿ ಎರಡು ಮಾತಿಲ್ಲ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಯಾವುದಕ್ಕೂ ರಾಜಿ ಇಲ್ಲ. ಯಾಕೆ ಉತ್ತರ ಭಾರತದವರ ಜೊತೆ ಬೆರೆಯಲು ಹಿಂದಿ ಕಲಿಯಬಾರದು? ನಾವು ರಾಷ್ಟ್ರ ಭಾಷೆಯನ್ನು ಗುರುತಿಸಬೇಕು, ಕಲಿಯಬೇಕುʼ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


